ಸರಕಾರಿ ಆಸ್ಪತ್ರೆ ಸೊರಗಲು ಸರಕಾರದ ನಿರ್ಲಕ್ಷ್ಯವೇ ಕಾರಣ: ಮುನೀರ್ ಕಾಟಿಪಳ್ಳ

Update: 2020-10-19 09:49 GMT

ಬಂಟ್ವಾಳ, ಅ.19: ಸೇವೆಯ ಹೆಸರಿನಲ್ಲಿ ತೆರೆಯುವ ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಖಾಸಗಿ ಆಸ್ಪತ್ರೆಗಳು ಬಳಿಕ ಮುಕ್ತ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುತ್ತಿವೆ. ಇದರ ಜೊತೆಗೆ ಸಾರ್ವಜನಿಕ‌ ಆರೋಗ್ಯ ಸೇವೆಯ‌ನ್ನು ಸರಕಾರಗಳು ಪೂರ್ಣವಾಗಿ ಕಡೆಗಣಿಸುತ್ತಾ ಬರುತ್ತಿದ್ದು ತಜ್ಞ ವೈದ್ಯರ ಸಹಿತ ಮೂಲಭೂತ ಸೌಲಭ್ಯಗಳ ಕೊರತೆ, ಗುಣಮಟ್ಟದ ಚಿಕಿತ್ಸೆಗಳು ಲಭ್ಯವಿಲ್ಲದಿರುವುದು, ಔಷಧಿಗಳ ಅಲಭ್ಯದಿಂದ ಜನರು ಸರಕಾರಿ ಆಸ್ಪತ್ರೆಗಳಿಂದ ದೂರ ಸರಿಯುವಂತಾಗುತ್ತಿದೆ ಎಂದು ಡಿವೈಎಫ್ ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಬಂಟ್ವಾಳ ತಾಲೂಕು ಇದರ ವತಿಯಿಂದ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ, ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ ಎಂದು ಆಗ್ರಹಿಸಿ ಬಿ.ಸಿ.ರೋಡ್ ಮಿನಿ ವಿಧಾನಸೌಧದ ಎದುರು ಸೋಮವಾರ ನಡೆದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಆರೋಗ್ಯ ಪ್ರತಿಯೊಬ್ಬ ನಾಗರಿಕನ ಹಕ್ಕು.  ತಾರತಮ್ಯವಿಲ್ಲದೆ ಭಾರತೀಯರೆಲ್ಲರಿಗೂ ಆರೋಗ್ಯ‌ ಸೇವೆ ದೊರಕಬೇಕು. ಇದು ನಮ್ಮ ಸಂವಿಧಾನದ ಆಶಯೂ ಆಗಿದೆ. ಆದರೆ ಮೂರು ದಶಕಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಾರೀಕರಣಕ್ಕೆ ಅನುವು ಮಾಡಿ ಕೊಡಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರಿ ವೈದ್ಯಕೀಯ ಸೇವೆಗಳಿಗೆ ಸಂಬಂಧಿಸಿ ಸರಕಾರವೇ ರೂಪಿಸಿದ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಕರ್ನಾಟಕ ವೈದ್ಯಕೀಯ ಅಧಿನಿಯಮದ ಪ್ರಕಾರ ಪ್ರತಿ ಇಪ್ಪತ್ತೈದು ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಎಪ್ಪತ್ತೈದು ಸಾವಿರ ಜನಸಂಖ್ಯೆ ಅಥವಾ ಹೋಬಳಿ ಕೇಂದ್ರವೊಂದಕ್ಕೆ ನಲವತ್ತು ಹಾಸಿಗೆಗಳ ಸಮುದಾಯ ಆಸ್ಪತ್ರೆ, ಪ್ರತಿ ತಾಲೂಕಿಗೊಂದು ನೂರು ಹಾಸಿಗೆಗಳ ಪೂರ್ಣ ಪ್ರಮಾಣದ ಆಸ್ಪತ್ರೆ, ಸುಸಜ್ಜಿತ ಜಿಲ್ಲಾಸ್ಪತ್ರೆ ಇರಬೇಕು. ಜೊತೆಗೆ ಅದಕ್ಕೆ ತಕ್ಕುದಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಆದರೆ ನಿಯಮದಂತೆ ಪ್ರಾಥಮಿಕ, ಸಮುದಾಯ ಆಸ್ಪತ್ರೆಗಳನ್ನು ತೆರೆಯುವಲ್ಲಿ, ಆರೋಗ್ಯ ಸೇವೆ ಒದಗಿಸುವಲ್ಲಿ ಸರಕಾರ ತೀರಾ ನಿರ್ಲಕ್ಷ್ಯ ತೋರುತ್ತಿದೆ ಎಂದು ಅವರು ಆರೋಪಿಸಿದರು.

ಪ್ರಸಕ್ತ ಇರುವ ಆರೋಗ್ಯ ಕೇಂದ್ರಗಳಲ್ಲೂ ವೈದ್ಯರ, ಸಿಬ್ಬಂದಿ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಇದು ತಳಮಟ್ಟದಲ್ಲಿ ಜನಸಾಮಾನ್ಯರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಿದೆ. ಇಂತಹ ಸ್ಥಿತಿ ಖಾಸಗಿ ಆಸ್ಪತ್ರೆಗಳಿಗೆ ಅನುಕೂಲಕರವಾಗಿದೆ. ಆರೋಗ್ಯ ಯೋಜನೆಗಳು, ಇನ್ಸೂರೆನ್ಸ್ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಖಜಾನೆಯಿಂದ ಸರಕಾರ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಇದರಿಂದಾಗಿ ಸರಕಾರಿ ಆಸ್ಪತ್ರೆಗಳು ಸೊರಗಿ ಖಾಸಗಿ ಆಸ್ಪತ್ರೆಗಳು ಬೆಳೆಯುತ್ತಿವೆ ಎಂದರು.

ಎಂಟು ತಾಲೂಕು, ಸುಮಾರು ಇಪ್ಪತ್ತೈದು ಲಕ್ಷ ಜನಸಂಖ್ಯೆ ಇರುವ ದಕ್ಷಿಣ ಕನ್ನಡ ಜಿಲ್ಲೆ ಕೇವಲ ನಾಲ್ಕು ತಾಲೂಕು ಆಸ್ಪತ್ರೆ, ಎಂಟು ಸಮುದಾಯ ಆಸ್ಪತ್ರೆಗಳನ್ನು ಹೊಂದಿದೆ. ಮಂಜೂರಾದ 1,800 ಹುದ್ದೆಗಳಲ್ಲಿ ಅರ್ಧದಷ್ಟು ಖಾಲಿ ಬಿದ್ದಿವೆ.  ಕೊರೋನ ಸಂದರ್ಭದಲ್ಲಿ ಅರೋಗ್ಯ ಕ್ಷೇತ್ರದ ವ್ಯಾಪಾರೀಕರಣ ಘೋರ ಮಟ್ಟಕ್ಕೆ ತಲುಪಿದೆ ಎಂದರು.

ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷ್ ಆಡಳಿತ ನಿರ್ಮಿಸಿದ ವೆನ್ ಲಾಕ್ ಜಿಲ್ಲಾಸ್ಪತ್ರೆಯನ್ನು ಬಳಸಿಕೊಂಡು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಉತ್ತಮ ಅವಕಾಶ ಇದ್ದರೂ ಅದಕ್ಕೆ ಬದಲಾಗಿ ವೆನ್ ಲಾಕ್ ಅನ್ನು ಕ್ಲಿನಿಕಲ್ ಕಲಿಕೆಗೆ ಬಳಸಿಕೊಂಡು ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲು ಖಾಸಗಿಯವರಿಗೆ ಅವಕಾಶ ನೀಡಲಾಗಿದೆ. ಎಂಟು ಖಾಸಗಿ ಮೆಡಿಕಲ್ ಕಾಲೇಜುಗಳು ಇರುವ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಇಲ್ಲದಿರುವುದು ಖೇದಕರ. ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಕನಿಷ್ಟ ಮೂರು ಇರಬೇಕಾದಲ್ಲಿ ಕೇವಲ ಒಂದು ಸಮುದಾಯ ಆಸ್ಪತ್ರೆ ಮಾತ್ರ ಇದೆ. ಇರುವ ಸಮುದಾಯ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ, ಸಿಬ್ಬಂದಿ ಕೊರತೆ ಇದೆ ಎಂದು ಹೇಳಿದರು.

ಈ ಎಲ್ಲಾ ಸಮಸ್ಯೆಗಳಿಗೆ ಸರಕಾರಿ ಅರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದೇ ದಾರಿ. ವೆನ್ ಲಾಕ್ ಅನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಸರಕಾರಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಬೇಕು. ಜನಸಂಖ್ಯೆಗೆ ಅನುಸಾರ ಪ್ರಾಥಮಿಕ, ಸಮುದಾಯ ಆಸ್ಪತ್ರೆ ನಿರ್ಮಿಸಿ, ಖಾಲಿ ಇರುವ ವೈದ್ಯ, ಸಿಬ್ಬಂದಿ ಭರ್ತಿ ಮಾಡಬೇಕು. ಜಿಲ್ಲೆಯ ಎಲ್ಲಾ ಎಂಟು ತಾಲೂಕುಗಳಲ್ಲಿ ಪೂರ್ಣಪ್ರಮಾಣದ ನೂರು ಹಾಸಿಗೆಗಳ ತಾಲೂಕು ಆಸ್ಪತ್ರೆ  ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದರು.

ಮನಪಾ ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತಬೈಲ್, ಪ್ರಮುಖರಾದ ಬಿ.ಶೇಖರ್, ಸದಾಶಿವ ಬಂಗೇರ, ಚಿತ್ರರಂಜನ್ ಶೆಟ್ಟಿ ಬೊಂಡಾಲ, ರಾಜಾ ಪಲ್ಲಮಜಲ್, ಅಲ್ತಾಫ್ ತುಂಬೆ, ರಾಮಣ್ಣ ವಿಟ್ಲ, ಓಶ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್, ಭಾರತೀ ಪ್ರಶಾಂತ್, ನವಾಝ್ ಬಂಟ್ವಾಳ ಮಾತನಾಡಿದರು.

ಡಿವೈಎಫ್ ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಪ್ರಮುಖರಾದ ಸೀತಾರಾಂ ಬೇರಿಂಜ, ಅಶ್ರಫ್ ಕಲ್ಲೇಗ, ಸುರೇಂದ್ರ ಕೋಟ್ಯಾನ್, ರಾಜಾ ಚೆಂಡ್ತಿಮಾರ್, ಹಾರೂನ್ ರಶೀದ್, ಕೃಷ್ಣಪ್ಪ ಪುದ್ದೊಟ್ಟು, ಮುಹಮ್ಮದ್ ಇಸಾಕ್, ದಿವಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ತುಳಸೀದಾಸ್ ವಿಟ್ಲ ಸ್ವಾಗತಿಸಿದರು. ಸಲೀಂ ವಂದಿಸಿದರು. ಸುರೇಶ್ ಕುಮಾರ್ ಬಂಟ್ವಾಳ ಪ್ರಾಸ್ತವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News