ಉಡುಪಿ ಜಿಲ್ಲೆಯಲ್ಲಿ ಸೋಮವಾರ 68 ಮಂದಿಗೆ ಕೊರೋನ ಪಾಸಿಟಿವ್, ಇಬ್ಬರು ಮೃತ್ಯು

Update: 2020-10-19 14:02 GMT

ಉಡುಪಿ, ಅ.19: ಜಿಲ್ಲೆಯಲ್ಲಿ ಸೋಮವಾರ ಒಟ್ಟು 68 ಮಂದಿಯಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ. ದಿನದಲ್ಲಿ ಇಬ್ಬರು ಕೊರೋನ ಸೋಂಕಿನೊಂದಿಗೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಳೆದೊಂದು ವಾರದಿಂದ ಇಳಿಮುಖ ವಾಗಿದ್ದರೂ, ಕೊರೋನ ಜಿಲ್ಲೆಯಲ್ಲಿ ಹತೋಟಿಗೆ ಬರುತ್ತಿದೆ ಎಂದು ಈಗಲೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ದಿನದಲ್ಲಿ ಪರೀಕ್ಷೆಗೆ ಪಡೆಯುವ ಸ್ಯಾಂಪಲ್ ಗಳ ಸಂಖ್ಯೆಗನುಗುಣವಾಗಿ ಪಾಸಿಟಿವ್ ಬರುವ ಫಲಿತಾಂಶದಲ್ಲಿ ಏರಿಳಿತ ಗಳಾಗುತ್ತಿವೆ. ಕಳೆದ ಮೂರು ದಿನಗಳಿಂದ ಇದು ಕ್ರಮವಾಗಿ ಶೇ.10.96, ಶೇ.5.85, ಶೇ.7.65 ಆಗಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಇಂದು ಪಾಸಿಟಿವ್ ಬಂದ 68 ಮಂದಿಯಲ್ಲಿ ಮಕ್ಕಳು ಸೇರಿದಂತೆ 38 ಮಂದಿ ಪುರುಷರು ಹಾಗೂ 30 ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ 32 ಪುರುಷರು ಹಾಗೂ 27 ಮಹಿಳೆಯರಲ್ಲಿ ಯಾವುದೇ ರೋಗದ ಲಕ್ಷಣಗಳು ಕಂಡುಬಂದಿಲ್ಲ. ಉಡುಪಿ ತಾಲೂಕಿನ 39, ಕುಂದಾಪುರ ತಾಲೂಕಿನ 8 ಹಾಗೂ ಕಾರ್ಕಳ ತಾಲೂಕಿನ 21 ಮಂದಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ ಎಂದು ಡಾ.ಸೂಡ ಹೇಳಿದರು.

ದಿನದಲ್ಲಿ ಪಾಸಿಟಿವ್ ಬಂದ 68 ಮಂದಿಯಲ್ಲಿ ನಾಲ್ವರನ್ನು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಉಳಿದ 64 ಮಂದಿ ತಮ್ಮ ತಮ್ಮ ಮನೆಗಳಲ್ಲೇ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು.

163 ಮಂದಿ ಗುಣಮುಖ: ಸೋಮವಾರ ಒಟ್ಟು 163 ಮಂದಿ ಸೋಂಕಿ ನಿಂದ ಗುಣಮುಖರಾಗಿ ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಹೀಗೆ ಸೋಂಕಿನಿಂದ ಮುಕ್ತರಾಗಿ ಮನೆಗೆ ತೆರಳಿದವರ ಒಟ್ಟು ಸಂಖ್ಯೆ ಈಗ 18,895 ಆಗಿದೆ. ಜಿಲ್ಲೆಯಲ್ಲಿ ಸದ್ಯ 1826 ಸಕ್ರೀಯ ಕೋವಿಡ್ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಮತ್ತು ಮನೆಗಳ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದವರು ತಿಳಿಸಿದರು.

1326 ನೆಗೆಟಿವ್: ಜಿಲ್ಲೆಯಲ್ಲಿ ಇಂದು ಒಟ್ಟು 1436 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಇವರಲ್ಲಿ 1326 ಮಂದಿ ನೆಗೆಟಿವ್ ಬಂದಿದ್ದು, 110 ಮಂದಿ ಮಾತ್ರ ಪಾಸಿಟಿವ್ ಬಂದಿದ್ದಾರೆ. ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 20,938 ಆಗಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು 1,58,551 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 1,37,613 ಮಂದಿ ನೆಗೆಟಿವ್ ಹಾಗೂ 20,938 ಮಂದಿ ಪಾಸಿಟಿವ್ ಬಂದಿದ್ದಾರೆ. ಇವರಲ್ಲಿ 18,895 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಈವರೆಗೆ ಒಟ್ಟು 175 ಮಂದಿ ಮೃತಪಟ್ಟಿದ್ದಾರೆ.

ಇಬ್ಬರ ಸಾವು: ಸೋಮವಾರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ. ಕಾರ್ಕಳ ತಾಲೂಕಿನ 63 ವರ್ಷ ಪ್ರಾಯದ ಪುರುಷ ಹಾಗೂ ಕುಂದಾಪುರ ತಾಲೂಕಿನ 55 ವರ್ಷ ಪ್ರಾಯದ ಮಹಿಳೆ ಸತ್ತವರಲ್ಲಿ ಸೇರಿದ್ದಾರೆ. ಇಬ್ಬರು ಅನ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಕೋವಿಡ್ ಪಾಸಿಟಿವ್‌ನೊಂದಿಗೆ ಸ್ಥಿತಿ ವಿಷಮಿಸಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ದೈನಂದಿನ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News