ಕಮಲನಾಥ್ ರ ‘ಐಟಂ’ ಹೇಳಿಕೆಯ ವಿರುದ್ಧ ಚೌಹಾಣ್, ಸಿಂಧಿಯಾ ಮೌನ ಪ್ರತಿಭಟನೆ

Update: 2020-10-19 14:24 GMT

ಭೋಪಾಲ್,ಅ.19: ಬಿಜೆಪಿ ಸಚಿವೆ ಇಮರ್ತಿ ದೇವಿ ಅವರನ್ನು ‘ಐಟಂ’ಎಂದು ಕರೆದಿದ್ದಕ್ಕಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸೋಮವಾರ ಮಾಜಿ ಮುಖ್ಯಮಂತ್ರಿ ಕಮಲನಾಥ ವಿರುದ್ಧ ಮೌನ ಪ್ರತಿಭಟನೆ ನಡೆಸಿದರು. ಚೌಹಾಣ್ ಅವರು ಭೋಪಾಲದಲ್ಲಿ ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರೆ ಸಿಂಧಿಯಾ ಮತ್ತು ಇತರ ಬಿಜೆಪಿ ಶಾಸಕರು ಇಂದೋರಿನಲ್ಲಿ ಪ್ರತಿಭಟನೆ ನಡೆಸಿದರು.

ಕಮಲನಾಥ್ ಅವರ ಹೇಳಿಕೆ ರಾಜ್ಯದಲ್ಲಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ರಾಜ್ಯದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗಳು ನಡೆಯಲಿದ್ದು,ರವಿವಾರ ದಾಬ್ರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುರೇಶ ರಾಜಾ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಕಮಲನಾಥ,ರಾಜಾ ‘ಐಟಂ ’ ಆಗಿರುವ ತನ್ನ ಪ್ರತಿಸ್ಪರ್ಧಿ (ಇಮರ್ತಿ ದೇವಿ)ಯಂತಲ್ಲ,ಅವರೊಬ್ಬ ಸರಳ ವ್ಯಕ್ತಿ ಎಂದು ಹೊಗಳಿದ್ದರು. ‘ಎದುರಾಳಿ ಅಭ್ಯರ್ಥಿಯ ಹೆಸರನ್ನು ನಾನೇಕೆ ಹೇಳಬೇಕು. ಅವರು ಯಾರು ಎಂದು ನನಗಿಂತ ಚೆನ್ನಾಗಿ ನಿಮಗೇ ಗೊತ್ತಿದೆ. ಎಂತಹ ಐಟಂ!’ಎಂದು ಕಮಲನಾಥ ಹೇಳಿದ್ದರು.

ಚೌಹಾಣ್ ರಾಜ್ಯಸಚಿವರಾದ ನರೋತ್ತಮ ಮಿಶ್ರಾ, ಭೂಪೇಂದ್ರ ಸಿಂಗ್,ವಿಶ್ವಾಸ್ ಸಾರಂಗ ಮತ್ತು ಕೆಲವು ಮಹಿಳಾ ಬಿಜೆಪಿ ಕಾರ್ಯಕರ್ತೆಯರೊಂದಿಗೆ ಭೋಪಾಲದ ಮಿಂಟೋ ಹಾಲ್‌ನಲ್ಲಿ ಬೆಳಿಗ್ಗೆ 10 ಗಂಟೆಗೆ ‘ಮೌನವೃತ ’ವನ್ನು ಆರಂಭಿಸಿದರೆ ಅತ್ತ ಇಂದೋರಿನಲ್ಲಿ ಬಿಜೆಪಿಯ ರಾಜ್ಯಸಭಾ ಸದಸ್ಯ ಸಿಂದಿಯಾ ಮತ್ತು ಲೋಕಸಭಾ ಸದಸ್ಯ ಶಂಕರ ಲಾಲ್ವಾನಿ ಅವರು ಮಹಾತ್ಮಾ ಗಾಂಧಿ ಪ್ರತಿಮೆಯ ಎದುರು ಪ್ರತಿಭಟನೆ ನಡೆಸಿದರು. ಕೇಂದ್ರ ಸಚಿವ ನರೇಂದ್ರಸಿಂಗ್ ತೋಮರ್,ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ವಿ.ಡಿ.ಶರ್ಮಾ ಮತ್ತಿತರರು ಗ್ವಾಲಿಯರ್‌ನಲ್ಲಿ ಪ್ರತಿಭಟನೆ ನಡೆಸಿದರು.

ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವ ಬಿಜೆಪಿಯು, ಕಮಲನಾಥ್ ಹೇಳಿಕೆಯು ಮಹಿಳಾ ನಾಯಕಿಯರಿಗೆ ಮತ್ತು ಎಸ್‌ಸಿ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದೆ ಎಂದು ಹೇಳಿದೆ.

ಇದಕ್ಕೂ ಮುನ್ನ ಚೌಹಾಣ್ ಅವರು,‘ಕಮಲನಾಥ್ ಹೇಳಿಕೆಯು ಬಿಜೆಪಿ ಸಚಿವೆಗೆ ಮಾತ್ರವಲ್ಲ,ಗ್ವಾಲಿಯರ್-ಚಂಬಲ್ ಪ್ರದೇಶದ ಪ್ರತಿಯೊಬ್ಬ ಮಹಿಳೆಗೆ ಮಾಡಿರುವ ಅವಮಾನವಾಗಿದೆ. ಅವರ ಅಗ್ಗದ ಹೇಳಿಕೆಯಿಂದ ಕಾಂಗ್ರೆಸಿನ ವಿಕೃತ ಮತ್ತು ತುಚ್ಛ ಮನಃಸ್ಥಿತಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ ’ಎಂದು ಟ್ವೀಟಿಸಿದ್ದರು.

 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿರುವ ಇಮರ್ತಿ ದೇವಿ ಕಳೆದ ಮಾರ್ಚ್‌ನಲ್ಲಿ ಕಾಂಗ್ರೆಸಿಗೆ ರಾಜೀನಾಮೆ ನೀಡಿ ಕಮಲನಾಥ್ ಸರಕಾರದ ಪತನಕ್ಕೆ ಕಾರಣರಾಗಿದ್ದ 22 ಶಾಸಕರಲ್ಲಿ ಒಬ್ಬರಾಗಿದ್ದಾರೆ. ಬಳಿಕ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಅವರು ಈಗ ಎಸ್‌ಸಿ ಸಮುದಾಯಕ್ಕೆ ಮೀಸಲಾಗಿರುವ ದಾಬ್ರಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ರಾಜ್ಯದಲ್ಲಿ ನ.3ರಂದು ಉಪಚುನಾವಣೆಗಳು ನಡೆಯಲಿದ್ದು,ನ.10ರಂದು ಮತಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News