ಗ್ರಂಥಾಲಯಗಳು ಹೆಚ್ಚು ಸಮಯ ತೆರೆದಿರಲಿ

Update: 2020-10-19 17:26 GMT

ಮಾನ್ಯರೇ,

ಕೊರೋನ ಪೀಡೆ ಕಡಿಮೆಯಾಗದಿದ್ದರೂ ಹಲವಾರು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಾರ್ವಜನಿಕ ಗ್ರಂಥಾಲಯಗಳು ಕಳೆದ ತಿಂಗಳಿನಿಂದ ರಾಜ್ಯಾದ್ಯಂತ ಆರಂಭವಾಗಿ ಸದ್ಯ ಕಾರ್ಯನಿರ್ವಹಿಸುತ್ತಿರುವುದು ಸ್ವಾಗತಾರ್ಹ..! ಆದರೆ ಈಗ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಅಭ್ಯಾಸ ಮಾಡಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಯ ಸಿಗುತ್ತಿಲ್ಲ. ಸರಕಾರಿ ಕಚೇರಿಗಳಾದ ಜಿಲ್ಲಾಧಿಕಾರಿಗಳ ಕಚೇರಿ, ತಾಲೂಕು ಆಡಳಿತ ಭವನ ಹಾಗೂ ಇನ್ನಿತರ ಪ್ರಮುಖ ಇಲಾಖೆಗಳ ಕಚೇರಿಗಳು ಈ ಮೊದಲು ಹೇಗೆ ಕಾರ್ಯನಿರ್ವಹಿಸುತ್ತಿದ್ದವೋ ಅಷ್ಟೇ ಸಮಯ ಈಗಲೂ ಕಾರ್ಯನಿರ್ವಹಿಸುತ್ತಿವೆ. ಆದರೆ ಗ್ರಂಥಾಲಯದಲ್ಲಿ ಮಾತ್ರ ಸಮಯಾವಕಾಶ ತುಂಬಾ ಕಡಿಮೆ ಇದೆ.

ಅಂದರೆ, ಬೆಳಗ್ಗೆ 8:00 ಗಂಟೆಗೆ ಆರಂಭವಾದರೆ 11:30 ಮತ್ತು ಸಾಯಂಕಾಲ 4ರಿಂದ 8ಗಂಟೆಯವರೆಗೆ ಮಾತ್ರ. ಇಲ್ಲಿ ಸಮಯವನ್ನು ಹೆಚ್ಚಿಸುವ ಅಗತ್ಯ ಇದೆ. ಇನ್ನು ಕೆಲವೇ ದಿನಗಳಲ್ಲಿ ಎಫ್‌ಡಿಎ, ಎಸ್‌ಡಿಎ, ರೈಲ್ವೆ, ಕೆಎಎಸ್ ಮುಖ್ಯ ಪರೀಕ್ಷೆ ಮತ್ತು ಕೇಂದ್ರ ನಾಗರಿಕ ಸೇವಾ ಮುಖ್ಯ ಪರೀಕ್ಷೆ ನಡೆಯುವುದರಿಂದ ಅಸಂಖ್ಯಾತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಓದುವ ಸಲುವಾಗಿ ತಮ್ಮ ಊರುಗಳಿಂದ ಬಂದು ಪಟ್ಟಣ ಹಾಗೂ ಜಿಲ್ಲಾ ಕೇಂದ್ರಗಳ ಕೇಂದ್ರ ಗ್ರಂಥಾಲಯಗಳಲ್ಲಿ ದಿನಂಪ್ರತಿ ದಿನವಿಡೀ ಅಭ್ಯಾಸದಲ್ಲಿ ತೊಡಗುತ್ತಾರೆ. ಆದ್ದರಿಂದ ಸಂಬಂಧಿತ ಇಲಾಖೆ ದಯವಿಟ್ಟು ಸಾರ್ವಜನಿಕ ಗ್ರಂಥಾಲಯಗಳ ಸಮಯವನ್ನು ರಾಜಾದ್ಯಂತ ಮತ್ತೊಮ್ಮೆ ಪರಿಷ್ಕರಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ಕ್ರಮಕೈಗೊಳ್ಳಲಿ.

Writer - -ಅನಿಲ್ ಕುಮಾರ್, ನಂಜನಗೂಡು

contributor

Editor - -ಅನಿಲ್ ಕುಮಾರ್, ನಂಜನಗೂಡು

contributor

Similar News