×
Ad

ಪ.ಬಂಗಾಳದಲ್ಲಿ ದುರ್ಗಾ ಪೂಜಾ ಮಂಟಪಗಳಿಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ: ಹೈಕೋರ್ಟ್

Update: 2020-10-19 23:49 IST

ಕೋಲ್ಕತಾ,ಅ.19: ಪ.ಬಂಗಾಳದ ನಾಡಹಬ್ಬವಾಗಿರುವ ದುರ್ಗಾ ಪೂಜೆಗೆ ಇನ್ನು ಮೂರು ದಿನಗಳು ಬಾಕಿಯಿರುವಂತೆ ಸೋಮವಾರ ನಿರ್ದೇಶವೊಂದನ್ನು ಹೊರಡಿಸಿರುವ ಕಲ್ಕತ್ತಾ ಉಚ್ಚ ನ್ಯಾಯಾಲಯವು,ಸಾರ್ವಜನಿಕರಿಗೆ ಪೂಜಾ ಮಂಟಪಗಳಲ್ಲಿ ಪ್ರವೇಶವನ್ನು ನಿಷೇಧಿಸಿದೆ. ಸಂಘಟಕರು ಮಾತ್ರ ಮಂಟಪವನ್ನು ಪ್ರವೇಶಿಸಬಹುದು ಎಂದು ಅದು ಹೇಳಿದೆ. ಕೊರೋನ ವೈರಸ್ ಪಿಡುಗಿನ ಹಿನ್ನೆಲೆಯಲ್ಲಿ ಪ್ರವೇಶಾವಕಾಶವನ್ನು ದೊಡ್ಡ ಮಂಟಪಗಳಲ್ಲಿ 25 ಮತ್ತು ಸಣ್ಣ ಮಂಟಪಗಳಲ್ಲಿ 15 ಸಂಘಟಕರಿಗೆ ಸೀಮಿತಗೊಳಿಸಲಾಗಿದೆ.

 ಎಲ್ಲ ಪೂಜಾ ಮಂಟಪಗಳ ಪ್ರವೇಶದ್ವಾರಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು ಮತ್ತು ಇವು ಸಣ್ಣ ಮಂಟಪಗಳಿಗೆ ಐದು ಮೀಟರ್ ಹಾಗೂ ದೊಡ್ಡ ಮಂಟಪಗಳಾದರೆ ಹತ್ತು ಮೀಟರ್ ದೂರದಲ್ಲಿರಬೇಕು ಎಂದು ನ್ಯಾಯಾಲಯವು ತಿಳಿಸಿದೆ.

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮಾರ್ಗಸೂಚಿಗಳ ಪಾಲನೆಗೆ ಒತ್ತು ನೀಡಿರುವ ನ್ಯಾಯಾಲಯವು,ನಗರದಲ್ಲಿಯ 3,000ಕ್ಕೂ ಅಧಿಕ ದುರ್ಗಾ ಪೂಜಾ ಮಂಟಪಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಕೋಲ್ಕತಾದಲ್ಲಿ ಪೊಲೀಸರ ಕೊರತೆಯಿದೆ ಎಂದು ತಿಳಿಸಿದೆ.

ಕಳೆದ ಕೆಲವು ವಾರಗಳಲ್ಲಿ ಜನರು ಕೋವಿಡ್ ಶಿಷ್ಟಾಚಾರಗಳನ್ನು ಕಡೆಗಣಿಸಿ ದುರ್ಗಾ ಪೂಜೆಗೆ ಖರೀದಿಗಳಲ್ಲಿ ತೊಡಗಿರುವುದರಿಂದ ನಗರದಲ್ಲಿ ಕೊರೋನ ವೈರಸ್ ಪ್ರಕರಣಗಳು ಹೆಚ್ಚತೊಡಗಿವೆ. ಮಾಸ್ಕ್ ಧಾರಣೆ,ಸುರಕ್ಷಿತ ಅಂತರ ಇತ್ಯಾದಿ ಎಚ್ಚರಿಕೆಗಳನ್ನು ಗಾಳಿಗೆ ತೂರಿರುವ ಜನರು ಮಾರುಕಟ್ಟೆಗಳಲ್ಲಿ ಗುಂಪುಗುಂಪಾಗಿ ಸೇರುತ್ತಿದ್ದಾರೆ.

 ನಗರದ ರಸ್ತೆಗಳಲ್ಲಿ ಜನಸಾಗರ ಆರೋಗ್ಯ ತಜ್ಞರಲ್ಲಿ ಆತಂಕ ಸೃಷ್ಟಿಸಿದೆ. ಸಾಮೂಹಿಕ ಸೋಂಕು ಹರಡಬಹುದು ಮತ್ತು ರಾಜ್ಯದಲ್ಲಿ ಕೊರೋನ ವೈರಸ್‌ನ ಎರಡನೇ ಅಲೆ ಏಳಬಹುದು ಎಂಬ ಭೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ.

ರವಿವಾರದವರೆಗೆ ಪ.ಬಂಗಾಳದಲ್ಲಿ ಒಟ್ಟು 3,21,036 ಕೋವಿಡ್ ಪ್ರಕರಣಗಳು ದಾಖಲಾಗಿದ್ದು,6,000ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News