ಗ್ರಾಹಕರಿಗೆ ಕಣ್ಣೀರು ತರಿಸುತ್ತಿರುವ ಈರುಳ್ಳಿ

Update: 2020-10-20 06:17 GMT

ಮಂಗಳೂರು, ಅ.20: ಹಿಂಗಾರು ಮಳೆ ಆರಂಭವಾದ ಬಳಿಕ ಈರುಳ್ಳಿ ದರ ಏಕಾಏಕಿ ಏರಿಕೆಯಾಗುತ್ತಿದ್ದು, ಗ್ರಾಹಕರ ಜೇಬಿಗೆ ಹೊರೆಯಾರಂಭಿಸಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಪ್ರವಾಹ, ಅತಿವೃಷ್ಟಿಯಿಂದ ಫಸಲು ಕಡಿಮೆಯಾಗಿರುವುದು ದಿನನಿತ್ಯದ ಅಡುಗೆ ಬಳಕೆಗೆ ಅತಿ ಅಗತ್ಯವಾದ ಈರುಳ್ಳಿ ಬೆಲೆ ಗಗನಕ್ಕೇರಲು ಕಾರಣ ಎನ್ನಲಾಗುತ್ತಿದೆ.

ಈರುಳ್ಳಿ ದರ ನೂರರ ಗಡಿ ಸಮೀಪಿಸುತ್ತಿದ್ದರೆ, ನಗರದ ಮಾರುಕಟ್ಟೆಯಲ್ಲಿ ಈರುಳ್ಳಿಯ ಕೊರತೆಯೂ ಉಂಟಾಗಿದೆ. ಮಂಗಳೂರು ಎಪಿಎಂಸಿಯಲ್ಲಿ ಸಣ್ಣ ಈರುಳ್ಳಿ ಬೆಲೆ 60 ರೂ.ನಿಂದ ಆರಂಭಗೊಂಡು ದೊಡ್ಡ ಈರುಳ್ಳಿಯ ದರ 85 ರೂ.ವರೆಗೆ ಏರಿಕೆಯಾಗಿದೆ. ಇನ್ನೆರಡು ದಿನಗಳಲ್ಲಿ ಇದು 100ರ ಗಡಿ ದಾಟಲಿದೆ ಎನ್ನುವುದು ಮಾರುಕಟ್ಟೆಯ ತಜ್ಞರ ಅಭಿಮತ.

ಕರ್ನಾಟಕ, ಮಹಾರಾಷ್ಟ್ರ ಮತ್ತಿತರ ಭಾಗಗಳಲ್ಲಿ ಸೆಪ್ಟಂಬರ್ ಕೊನೆಯ ವಾರ ಹಾಗೂ ಅಕ್ಟೋಬರ್ ಆರಂಭದಲ್ಲಿ ಹೆಚ್ಚು ಮಳೆ ಸುರಿದಿದೆ. ಈರುಳ್ಳಿ ಕೊಯ್ಲಿಗೆ ಸಿದ್ಧಗೊಳ್ಳುತ್ತಿದ್ದ ವೇಳೆ ಉಂಟಾದ ಅತಿವೃಷ್ಟಿಯಿಂದ ಬೆಳೆ ಹಾಳಾಯಿತು. ಎಕರೆಗೆ ಸರಾಸರಿ 250 ಚೀಲದಷ್ಟು ಸಿಗುತ್ತಿದ್ದ ಈರುಳ್ಳಿಯ ಪ್ರಮಾಣ 70 ಚೀಲಗಳಿಗೆ ಇಳಿಕೆಯಾಗಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆಯಿಲ್ಲದಿರುವುದೇ ಬೆಲೆ ಏರಿಕೆಗೆ ಮೂಲಕಾರಣ ಎನ್ನುತ್ತಾರೆ ಈರುಳ್ಳಿ ವ್ಯಾಪಾರಸ್ಥರು.

ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆಯೇರಿಕೆ ಮತ್ತು ಇಳಿಕೆಗೆ ರೈತರಿಗೆ ನೇರ ಸಂಬಂಧವಿಲ್ಲ. ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾದರೆ ಅದಕ್ಕೆ ತಕ್ಕಂತೆ ರೈತರಿಗೆ ಉತ್ತಮ ಬೆಲೆ ಲಭಿಸುವುದಿಲ್ಲ. ಆದರೆ ಬೆಲೆ ಇಳಿಕೆಯಾದರೆ ಅದರ ಪರಿಣಾಮ ಮಾತ್ರ ರೈತರ ಮೇಲಾಗುತ್ತದೆ. ಬೆಲೆಯೇರಿಕೆಯ ಸಂದರ್ಭ ಹೆಚ್ಚಿನ ಲಾಭವನ್ನು ಮಧ್ಯವರ್ತಿಗಳೇ ಪಡೆಯುತ್ತಾರೆ. ಬೆಲೆ ಏರಿಕೆಯಿಂದ ರೈತರಿಗೆ ಸಿಗುವ ಲಾಭದ ಪ್ರಮಾಣ ತೀರಾ ಕಡಿಮೆ. ಗ್ರಾಹಕರಿಗೆ ಆಗುವ ಹೊರೆ ಮಾತ್ರ ದುಪ್ಪಟ್ಟು ಎನ್ನುವುದು ವಿಪರ್ಯಾಸ.

‘‘ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಗದಗ, ಕೊಪ್ಪಳ, ಬಾಗಲಕೋಟೆ, ಹಾವೇರಿ, ರಾಯಚೂರು ಸೇರಿದಂತೆ ಹಲವೆಡೆ ರೈತರು ಮತ್ತೆ ಈರುಳ್ಳಿ ಬಿತ್ತನೆ ಮಾಡಿರುವುದರಿಂದ ಡಿಸೆಂಬರ್ ಕೊನೆ ಅಥವಾ ಜನವರಿಯ ವೇಳೆಗೆ ಈರುಳ್ಳಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಆಗ ಈರುಳ್ಳಿ ದರ ಅಲ್ಪ ಪ್ರಮಾಣದಲ್ಲಿ ತಗ್ಗುವ ಸಾಧ್ಯತೆಯಿದೆ. ದುರಾದೃಷ್ಟವಶಾತ್ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ಮಳೆ ಸುರಿದರೆ ಈರುಳ್ಳಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ’’ ಎನ್ನುತ್ತಾರೆ ನಗರದ ಕೇಂದ್ರ ಮಾರುಕಟ್ಟೆ ಸಮೀಪ ತಳ್ಳುಗಾಡಿಯಲ್ಲಿ ಈರುಳ್ಳಿ ಮಾರುವ ಹಾವೇರಿಯ ರಾಣೆಬೆನ್ನೂರಿನ ಯಲ್ಲಮ್ಮ.

ಕಳಪೆ ಈರುಳ್ಳಿಗೂ ಬೇಡಿಕೆ: ರಾಜ್ಯದಲ್ಲಿ ಬೆಳೆಯುವ ಈರುಳ್ಳಿ ಅಕ್ಟೋಬರ್-ನವೆಂಬರ್ ತಿಂಗಳಿಗೆ ಮಾರುಕಟ್ಟೆಗೆ ಬರುತ್ತದೆ. ಆದರೆ, ಈ ಬಾರಿ ವಿಪರೀತ ಮಳೆ ಸುರಿದಿದ್ದರಿಂದ ಫಸಲಿಗೆ ಹಾನಿಯಾಗಿ ಉತ್ಪಾದನೆ ಕಡಿಮೆಯಾಗಿದೆ. ಮಂಗಳೂರು ನಗರದ ಸ್ಟೇಟ್‌ಬ್ಯಾಂಕ್, ಎಪಿಎಂಸಿ, ಕಂಕನಾಡಿ ಮಾರುಕಟ್ಟೆ ಸಹಿತ ವಿವಿಧೆಡೆ ಕಳಪೆ ಗುಣಮಟ್ಟದ ಈರುಳ್ಳಿಗೂ ಬೇಡಿಕೆ ಇದೆ. ಉತ್ತಮ ಗುಣಮಟ್ಟದ ಈರುಳ್ಳಿ 80ರಿಂದ 85 ರೂ. ವರೆಗೆ ಭರ್ಜರಿಯಾಗಿ ಮಾರಾಟವಾಗುತ್ತಿದ್ದರೆ, ಮಧ್ಯಮ ವರ್ಗದ ಗ್ರಾಹಕರು ಕಳಪೆ ಗುಣಮಟ್ಟದ ಈರುಳ್ಳಿ ಖುರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೇಲ್ಭಾಗ ಹಾಗೂ ಕೆಳಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ಕೊಳೆತ ಈರುಳ್ಳಿ 50ರಿಂದ 60 ರೂ.ವರೆಗೆ ಮಾರಾಟವಾಗುತ್ತಿದೆ. ಮಂಗಳೂರು ನಗರದ ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಈರುಳ್ಳಿ ದೋಸೆ, ಈರುಳ್ಳಿ ಭಜ್ಜಿಗಳು ತಯಾರಿಕೆ ಬಹುತೇಕ ಸ್ಥಗಿತಗೊಂಡಿದೆ. ನಗರದ ಸಣ್ಣಪುಟ್ಟ ಅಂಗಡಿಗಳು ಸೇರಿದಂತೆ ಹೊಟೇಲ್‌ಗಳಲ್ಲಿ ಈರುಳ್ಳಿ ಬಜ್ಜಿ ತಯಾರಿಸುವುದನ್ನೇ ಕೈಬಿಟ್ಟಿದ್ದಾರೆ. 

ಕ್ಯಾಬೇಜ್‌ಗೂ ಬೇಡಿಕೆ: ಮಾರುಕಟ್ಟೆಯಲ್ಲಿ ನುಗ್ಗೆ, ಕ್ಯಾರೆಟ್, ಕ್ಯಾೇಜ್ ದರ ಕೂಡ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡಿದೆ. 20 ರೂ. ಇದ್ದ ಕ್ಯಾಬೇಜ್ ದರ ಈಗ 35ರಿಂದ 40ರೂ.ರವರೆಗೆ ಮಾರಾಟವಾಗುತ್ತಿದೆ. ಫಾಸ್ಟ್ ಫುಡ್ ಅಂಗಡಿಯವರು ಹೆಚ್ಚಾಗಿ ಈರುಳ್ಳಿ ಬಳಸುತ್ತಿದ್ದರು. ಬೆಲೆ ಏರಿಕೆಯಿಂದಾಗಿ ಕ್ಯಾಬೇಜವನ್ನೇ ಬಳಸುತ್ತಿದ್ದಾರೆ ಎನ್ನುತ್ತಾರೆ ಸ್ಟೇಟ್‌ಬ್ಯಾಂಕ್ ಸಮೀಪದ ವ್ಯಾಪಾರಿ ರಾಜೇಶ್.

ರಾಜ್ಯದಲ್ಲಿ ಈರುಳ್ಳಿ ಬೆಲೆ ತುಂಬಾ ದುಬಾರಿಯಾಗಿದೆ. ನಗರದ ಹಲೆವೆಡೆ 70-85 ರೂ. ವರೆಗೆ ಮಾರಾಟ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಈರುಳ್ಳಿ ದರ 100 ರೂ. ದಾಟಿ 150ಕ್ಕೆ ಜಿಗಿಯಲಿದೆ. ಪುಣೆ, ಕೋಲಾಪುರ, ಬೆಳಗಾವಿ, ಹುಬ್ಬಳ್ಳಿಯಿಂದ ಈರುಳ್ಳಿ ಆಮದಾಗುತ್ತಿತ್ತು. ಸದ್ಯ ಅತಿವೃಷ್ಟಿಯಿಂದ ಆಮದಾಗುತ್ತಿಲ್ಲ. ಏಜೆಂಟರು, ದೊಡ್ಡ ವ್ಯಾಪಾರಸ್ಥರಿಗೆ ಮಾತ್ರ ಇದು ಲಾಭದಾಯಕವಾಗಿದೆ. ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

ಬಿ.ಕೆ. ಇಮ್ತಿಯಾಝ್, ಪ್ರಧಾನ ಕಾರ್ಯದರ್ಶಿ, ಎಪಿಎಂಸಿ ವರ್ತಕರ ಸಂಘ

ಈರುಳ್ಳಿ ಬೆಲೆ ಏರಿಕೆ ಬಳಿಕ ವ್ಯಾಪಾರ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಮೊದಲು ದಿನಕ್ಕೆ ನಾಲ್ಕು ಚೀಲ ಈರುಳ್ಳಿ ಮಾರಾಟವಾಗುತ್ತಿತ್ತು. ಈಗ ಒಂದು ಚೀಲ ಈರುಳ್ಳಿ ಮಾರಾಟವಾಗಲು ಎರಡು ದಿನ ಬೇಕಾಗಿದೆ. ಈರುಳ್ಳಿಗೆ ಪರ್ಯಾಯವಾಗಿ ಕ್ಯಾಬೇಜ್ ಕೂಡಾ ಬಳಕೆಯಾಗುತ್ತಿದೆ. ಅದರ ಬೆಲೆಯಲ್ಲೂ ಇದೀಗ ಏಕಾಏಕಿ ಏರಿಕೆಯಾಗಿದೆ.

ಸತೀಶ್, ಕೇಂದ್ರ ಮಾರುಕಟ್ಟೆ ಸಮೀಪದ ವ್ಯಾಪಾರಸ್ಥ

ವಾರದ ಹಿಂದೆ 40 ರೂ. ಇದ್ದ ಈರುಳ್ಳಿ ದರ ಈಗ 75 ರೂ.ಗೆ ಏರಿಕೆಯಾಗುತ್ತಿರುವುದು ನಿಜ. ಇದೇ ಕಾರಣ ಇಟ್ಟುಕೊಂಡು ಏಜೆಂಟರು, ದೊಡ್ಡ ವ್ಯಾಪಾರಸ್ಥರು ಹಣ ಮಾಡುತ್ತಿದ್ದಾರೆ. ದಲ್ಲಾಳಿಗಳು ಗೋಡಾನ್‌ಗಳಲ್ಲಿ ಈರುಳ್ಳಿ ದಾಸ್ತಾನು ಮಾಡುತ್ತಿದ್ದಾರೆ. ಸರಕಾರ ದಾಳಿ ನಡೆಸಬೇಕು.

ಅಹ್ಮದ್ ಬಾವ, ವ್ಯಾಪಾರಸ್ಥ, ಮಂಗಳೂರು

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News