‘ಮಗಳನ್ನು ಉಳಿಸಿ, ಮಗಳನ್ನು ಓದಿಸಿ’ ಜಿಲ್ಲಾ ಮಟ್ಟದ ಕಾರ್ಯಕ್ರಮ ಉದ್ಘಾಟನೆ

Update: 2020-10-20 07:34 GMT

ಮಂಗಳೂರು, ಅ.20: ಮನೆಯಲ್ಲಿರುವ ಹೆಣ್ಣು ಸಬಲೆಯಾದರೆ ಆ ಕುಟುಂಬಕ್ಕೆ ಆಧಾರ ಎಂದು ದ.ಕ. ಜಿಲ್ಲಾ ಪಂಚಾಯತ್‌ನ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಭಿಪ್ರಾಯಿಸಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಇಂದು ‘ಮಗಳನ್ನು ಉಳಿಸಿ, ಮಗಳನ್ನು ಓದಿಸಿ’ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ದ.ಕ.ಜಿಲ್ಲಾಡಳಿತದ ನೇತೃತ್ವದಲ್ಲಿ ವಿವಿದ ಇಲಾಖೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಮನೆಯಲ್ಲಿ ಯಾವ ರೀತಿಯಲ್ಲಿ ಜಾಗರೂಕತೆ, ನಡೆಯ ಕುರಿತು ಜಾಗೃತಿಯನ್ನು ಮೂಡಿಸಲಾಗುತ್ತದೋ ಅದನ್ನು ಗಂಡು ಮಕ್ಕಳಿಗೂ ಅನ್ವಯಿಸಬೇಕು ಎಂದರು.

ಹೆಣ್ಣು ಹುಟ್ಟುತ್ತಲೇ ಸ್ವತಂತ್ರವಾಗಿರುತ್ತಾಳೆ. ಆದರೆ ಈ ಬಗ್ಗೆ ಆಕೆಗೆ ಮನವರಿಕೆ ಮಾಡುವ ಅಗತ್ಯವಿದೆ. ಇಂತಹ ಕಾರ್ಯಕ್ರಮ ಯಶಸ್ವಿ ಆಗಬೇಕಾದರೆ, ಹೆಣ್ಣು ಗಂಡೆಂಬ ಬೇಧವಿಲ್ಲದೆ ಲಿಂಗಾನುಪಾತವನ್ನು ಕಾಪಾಡುವಲ್ಲಿ ಮನುಷ್ಯತ್ವದ ನೆಲೆಯಲ್ಲಿ ವರ್ತಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರು ಹೆಚ್ಚಿನ ಗಮನ ಹರಿಸಬೇಕು ಎಂದವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಶ್ಯಾಮಲಾ, ದ.ಕ. ಜಿಲ್ಲೆಯಲ್ಲಿ 2017-18ನೆ ಸಾಲಿನಲ್ಲಿ ಇದ್ದ ಲಿಂಗಾನುಪಾತ 2019-20ನೆ ಸಾಲಿಗೆ 931ಕ್ಕೆ ಇಳಿಕೆಯಾಗಿದೆ ಎಂದರು.

ಜಿಲ್ಲಾ ಲೇಡಿಗೋಶನ್ ಆಸ್ಪತ್ರೆಯ ಆರ್‌ಎಂಒ ಡಾ.ದುರ್ಗಾಪ್ರಸಾದ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೇಯರ್ ದಿವಾಕರ ಪಾಂಡೇಶ್ವರ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್, ಜಿಪಂ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಮಮತಾ ಎಂ. ಶೆಟ್ಟಿ, ಧನಲಕ್ಷ್ಮಿ ಗಟ್ಟಿ, ರವೀಂದ್ರ ಕಂಬಳಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪಾಪಾ ಬೋವಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಸ್ವಾಮಿ, ಡಾ.ರಾಜೇಶ್, ಮನಪಾ ಉಪ ಆಯುಕ್ತೆ ಗಾಯತ್ರಿ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.


*ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ 2019-20ನೇ ಸಾಲಿನಲ್ಲಿ ಎಸೆಸೆಲ್ಸಿಯಲ್ಲಿ ಗರಿಷ್ಠ ಅಂಕ ಗಳಿಸಿದ 17 ವಿದ್ಯಾರ್ಥಿನಿಯರು ಹಾಗೂ ಶೇ.100 ಫಲಿತಾಂಶ ದಾಖಲಿಸಿದ 17 ಶಾಲೆಗಳನ್ನು ತಲಾ 5,000 ರೂ. ನಗದಿನೊಂದಿಗೆ ಪುರಸ್ಕರಿಸಲಾಯಿತು. *ಪ್ರಸಕ್ತ ಸಾಲಿನಲ್ಲಿ ಗರಿಷ್ಠ ಹೆಣ್ಣು ಮಕ್ಕಳು ಜನಿಸಿರುವ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ, ಪುತ್ತೂರು ತಾಲೂಕಿನ ಮರ್ಧಾಳ, ಬಂಟ್ವಾಳ ತಾಲೂಕಿನ ಕಳ್ಳಿಗೆ, ಮಂಗಳೂರು ತಾಲೂಕಿನ ಮುಚ್ಚೂರು ಹಾಗೂ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮ ಪಂಚಾಯತ್‌ಗಳನ್ನು ತಲಾ 10,000 ರೂ. ನಗದಿನೊಂದಿಗೆ ಸನ್ಮಾನಿಸಲಾಯಿತು.


*ಹೆಣ್ಣು ಮಕ್ಕಳ ಸ್ನೇಹಿ ಶಾಲೆಯ ವಾತಾವರಣ ಕಲ್ಪಿಸಿರುವ ಬೆಳ್ತಂಗಡಿಯ ಉಜಿರೆ ಸರಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ನಿರ್ವಹಣಾ ಸಮಿತಿಗೆ 30,000 ರೂ. ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. *2020ನೇ ಸಾಲಿನಲ್ಲಿ ಈವರೆಗೆ ಪ್ರತಿ ತಿಂಗಳ ಮೊದಲ ಗುರುವಾರ ಜನಿಸಿದ ಹೆಣ್ಣು ಮಕ್ಕಳ ಹೆತ್ತವರಿಗೆ ತಲಾ 1,000 ರೂ. ಪ್ರೋತ್ಸಾಹಧನ ನೀಡುವ ಕಾರ್ಯಕ್ರಮದಡಿ ಗುರುತಿಸಲಾದ 110 ಮಕ್ಕಳಲ್ಲಿ 2 ಮಕ್ಕಳ ಪೋಷಕರಿಗೆ ಸಾಂಕೇತಿಕವಾಗಿ ಪ್ರೋತ್ಸಾಹಧನ ವಿತರಿಸಲಾಯಿತು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News