ನಿವೇಶನ ಹಂಚಿಕೆ: 4,500 ಅರ್ಜಿ ವಿಲೇವಾರಿಗೆ ಬಾಕಿ

Update: 2020-10-20 13:24 GMT

ಮಂಗಳೂರು, ಅ.20: ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆಗಾಗಿ ಸುಮಾರು 4,500 ಅರ್ಜಿಗಳು ವಿಲೇವಾರಿಗೆ ಬಾಕಿಯಿದ್ದು, ಶೀಘ್ರ ಅದರ ಹಂಚಿಕೆಗೆ ಕ್ರಮ ಜರುಗಿಸಲಾಗುವುದು ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.

ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ನಿವೇಶನ ಹಂಚಿಕೆ ಕುರಿತಂತೆ ಈಗಾಗಲೇ ಎರಡು ಸಭೆಗಳು ನಡೆದಿದೆ. ಹಸ್ತಾಂತರ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿರುವುದು ನಿಜ. ಇದರಿಂದ ಸಾಕಷ್ಟು ಮಂದಿಗೆ ತೊಂದರೆಯಾಗಿರುವುದು ಗಮನಕ್ಕೆ ಬಂದಿದೆ. ಈಗಾಗಲೆ ನಿವೇಶನ ರಹಿತರಿಗಾಗಿ ತಾಲೂಕಿನಲ್ಲಿ 184 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಗೆ ವೇಗ ನೀಡಲಾಗುವುದು. ನಿವೇಶನಕ್ಕೆ ಯೋಗ್ಯವಾಗಿಲ್ಲದ ಜಾಗವನ್ನು ವಾಪಸ್ ಪಡೆಯಲಾಗುವುದು. ಕೆಲವೊಂದು ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ರಹಿತರ ಪಟ್ಟಿಯಲ್ಲಿ ಲೋಪವಿದ್ದು, ಅದನ್ನು ಸರಿಪಡಿಸಲು ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದರು.

ಗ್ರಾಪಂ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗಿರುವ ಬಗ್ಗೆ ಪಟ್ಟಿ ರಚಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ತಹಶೀಲ್ದಾರ್ ಅನಧಿಕೃತ ಕಟ್ಟಡಗಳು ಪತ್ತೆಯಾದರೆ ಅದನ್ನು ಗ್ರಾಪಂಗೆ ಹಸ್ತಾಂತರ ಮಾಡಲಾಗುವುದು. ಮಂಗಳೂರು ತಾಲೂಕಿನ 82 ಗ್ರಾಮಗಳಲ್ಲಿ 862 ಎಕರೆ ಗೋಮಾಳ ಪ್ರದೇಶವಿದೆ. ಇದರಲ್ಲಿ 411 ಎಕರೆ ಪ್ರದೇಶ ಖಾಲಿ ಇದ್ದು, ಆ ಜಾಗವನ್ನು ಸಂರಕ್ಷಣೆ ಮಾಡುವಲ್ಲಿ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗಂಜಿಮಠ-ಕುಪ್ಪೆಪದವು 30 ಲಕ್ಷ ರೂ.ನ ಜಿಲ್ಲಾ ಮುಖ್ಯ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಗುತ್ತಿಗೆದಾರರನ್ನು ಸಭೆಗೆ ಕರೆಸಿ ಮಾಹಿತಿ ಪಡೆಯಬೇಕು ಎಂದು ಗಂಜಿಮಠ ಕ್ಷೇ ತ್ರದ ಸದಸ್ಯರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಮುಹಮ್ಮದ್ ಮೋನು, ಗುತ್ತಿಗೆದಾರರನ್ನು ಸಭೆಗೆ ಕರೆಸಲು ಸಾಧ್ಯವಿಲ್ಲ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಬಳಿ ಮಾಹಿತಿ ಪಡೆಯಬಹುದು ಎಂದರು. ಈ ಬಗ್ಗೆ ಸ್ಪಷ್ಟಣೆ ನೀಡಿದ ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿ, ಮೂರು ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ಕುಪ್ಪೆಪದವು ಗ್ರಾಪಂ ವ್ಯಾಪ್ತಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಎರಡು ಕೊಳವೆಬಾವಿಗಳ ಪೈಕಿ ಒಂದು ಕೊಳವೆಬಾವಿಗೆ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಿಲ್ಲ ಎಂದು ಸದಸ್ಯ ನಾಗೇಶ್ ಶೆಟ್ಟಿ ತಿಳಿಸಿರು. ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಅಧಿಕಾರಿ ಈ ಬೋರ್‌ವೆಲ್ ಸಾರ್ವಜನಿಕ ಕುಡಿಯುವ ನೀರಿನ ಸ್ಥಾವರದಿಂದ 250 ಮೀ. ವ್ಯಾಪ್ತಿಗೆ ಬರುವುದರಿಂದ ವಿದ್ಯುತ್ ಸಂಪರ್ಕ ನೀಡಲಾಗಿಲ್ಲ. ಜಿಲ್ಲಾಧಿಕಾರಿಗಳ ಮಂಜೂರಾತಿ ಪಡೆದುಕೊಳ್ಳಬೇಕಾಗಿದೆ ಎಂದರು.

ಮಾತಿನ ಚಕಮಕಿ: ಗುರುಪುರ, ಕಂದಾವರ ಗ್ರಾಪಂ ವ್ಯಾಪ್ತಿಯ ಮೀನು ಮಾರುಕಟ್ಟೆ ವಿಚಾರ ಸಂಬಂಧಿಸಿ ತಾಪಂ ಸದಸ್ಯರ ಮಧ್ಯೆ ಮಾತಿಕ ಚಕಮಕಿ ನಡೆಯಿತು. ಕಂದಾವರ ಗ್ರಾಪಂಗೆ ಕಂದಾಯದ ಮೂಲವೇ ಕಡಿಮೆ ಇದ್ದು, ಈಗ ಆ ಗ್ರಾಪಂ ವ್ಯಾಪ್ತಿಯ ಅಂಗಡಿ ಕಟ್ಟಡಗಳನ್ನು ಏಲಂ ಮಾಡಲು ದಿನಾಂಕ ನಿಗದಿಗೊಳಿಸಲಾಗಿದೆ. ಈ ಬಗ್ಗೆ ಅಧ್ಯಕ್ಷರು ತಡೆಯಾಜ್ಞೆ ತಂದಿರುವುದನ್ನು ಪ್ರಶ್ನಿಸಲಾಯಿತು.

ಮೂಳೂರು ಗ್ರಾಮಕ್ಕೆ ಒಳಪಟ್ಟ ಮೀನು ಮಾರುಕಟ್ಟೆಯ ತೆರಿಗೆಯನ್ನು ಕಂದಾವರ ಗ್ರಾಪಂಗೆ ಪಾವತಿಸಲಾಗುತ್ತಿದೆ. ತೆರಿಗೆಯನ್ನು ಗುರುಪುರ ಗ್ರಾಪಂಗೆ ಪಾವತಿಸಬೇಕು. ಈ ಬಗ್ಗೆ 2012ರಿಂದಲೇ ಕಂದಾವರ ಗ್ರಾಪಂಗೆ ಪತ್ರವ್ಯವಹಾರ ನಡೆಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗುರುಪುರ ಕ್ಷೇತ್ರದ ಸದಸ್ಯರು ದೂರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜ್ ಸದ್ಯದಲ್ಲೇ ಸರ್ವೇ ದಿನಾಂಕ ನಿಗದಿ ಮಾಡಲಾಗುವುದು ಎಂದರು.

ಗ್ರಾಪಂ ವ್ಯಾಪ್ತಿಯಲ್ಲಿ ಪಿಂಚಣಿ ಅದಾಲತ್
ಪಿಂಚಣಿ ಪಾವತಿ ವ್ಯವಸ್ಥೆಯಲ್ಲಾಗುತ್ತಿರುವ ವಿಳಂಬ ಸಹಿತ ಲಾನುಭವಿಗಳಿಗಿರುವ ದೂರುಗಳ ಇತ್ಯರ್ಥಕ್ಕಾಗಿ ನವೆಂಬರ್‌ನಿಂದ ಗ್ರಾಪಂ ವ್ಯಾಪ್ತಿಯಲ್ಲಿ ಪಿಂಚಣಿ ಅದಾಲತ್ ಆರಂಭಿಸಲಾಗುವುದು. ಸದ್ಯ 1800 ಮಂದಿಗೆ ಪಿಂಚಣಿ ವಿಲೇವಾರಿ ಬಾಕಿ ಇದೆ. ಪಿಂಚಣಿ ಪಾವತಿಯು ಆನ್‌ಲೈನ್ ವ್ಯವಸ್ಥೆ ಆಗಿದ್ದು, ಕೆ-2ನಲ್ಲಿ ನೇರವಾಗಿ ಲಾನುಭವಿಗಳ ಖಾತೆಗೆ ವೇತನ ಪಾವತಿಯಾಗುವ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಕೆಲವು ದಿನಗಳಿಂದ ಸಮಸ್ಯೆ ಎದುರಾಗಿದೆ. ಅಂಚೆ ಕಚೇರಿಯಲ್ಲಿಯೂ ವಿವಿಧ ಸೇವೆಗಳು ಲಭ್ಯವಿದೆ. ಸಮಸ್ಯೆಗಳ ಇತ್ಯರ್ಥಕ್ಕೆ ಪಿಂಚಣಿ ಅದಾಲತ್ ಸಹಕಾರಿಯಾಗಲಿದೆ ಎಂದು ತಹಶಿಲ್ದಾರ್ ಗುರುಪ್ರಸಾದ್ ಹೇಳಿದರು.

ವೇದಿಕೆಯಲ್ಲಿ ತಾಪಂ ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News