ಉಡುಪಿ: ಮಾರುತಿ ಮಾನ್ಪಡೆ ನಿಧನಕ್ಕೆ ಜಿಲ್ಲಾ ಸಿಪಿಎಂ ಸಮಿತಿ ಸಂತಾಪ

Update: 2020-10-20 13:30 GMT

ಉಡುಪಿ, ಅ.20: ಸೋಲಾಪುರದ ಆಸ್ಪತ್ರೆಯಲ್ಲಿ ಇಂದು ನಿಧನರಾದ ರೈತ ನಾಯಕ, ಹಿರಿಯ ಸಿಪಿಎಂ ಮುಖಂಡ, ಪಕ್ಷದ ರಾಜ್ಯ ಸಮಿತಿ ಸದಸ್ಯ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ, ಕ.ರಾ.ಗ್ರಾಮ ಪಂಚಾಯತ್ ನೌಕರರ ಸಂಘದ ರಾಜ್ಯ ಅಧ್ಯಕ್ಷ ಮಾರುತಿ ಮಾನ್ಪಡೆ ಅವರಿಗೆ ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ತನ್ನ ಸಂತಾಪವನ್ನು ಸಲ್ಲಿಸಿದೆ.

ಶೋಷಿತ ಸಮುದಾಯದಿಂದ ಬಂದ ಮಾನ್ಪಡೆ, ಸರಕಾರಿ ಹುದ್ದೆ ತೊರೆದು, 1981-82ರಲ್ಲಿ ಜನಪರ ಚಳುವಳಿಯಲ್ಲಿ ಧುಮುಕಿ, ರೈತಚಳುವಳಿಯ ಮೂಲಕ ರಾಜ್ಯದಾದ್ಯಂತ ಚಿರಪರಿಚಿತರಾಗಿದ್ದರು. ದಲಿತ ಹಕ್ಕುಗಳ ಸಮಿತಿಯ ಮೂಲಕ ದಲಿತ ಸಂಕಷ್ಟಗಳಿಗೆ ಧ್ವನಿಯಾಗಿದ್ದರು. ಅಲ್ಪಸಂಖ್ಯಾತ ನಾಯಕ ರೊಡನೆಯೂ ನಿಕಟ ಸಂಪರ್ಕ ಹೊಂದಿದ್ದ ಅವರು, ಎಲ್ಲರೊಡನೆಯೂ ಸೌಹಾರ್ದತೆಯಿಂದಿದ್ದು, ದೀನದಲಿತರ, ತುಳಿತ ವರ್ಗದ ಜನರ ಕಣ್ಮಣಿ ಯಾಗಿದ್ದರು ಎಂದು ಅದು ತನ್ನ ಸಂತಾಪ ಸಂದೇಶದಲ್ಲಿ ತಿಳಿಸಿದೆ.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಮಾನ್ಪಡೆ ಅವರು ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತಂದ ರೈತ ವಿರೋಧಿ ಮಸೂದೆಗಳ ವಿರುದ್ಧ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಬಂಧನಕ್ಕೊಳ ಗಾಗಿದ್ದರು. ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧವೂ ಅವಿರತ ಹೋರಾಟ ನಡೆಸಿದ್ದರು. ಗುಲ್ಪರ್ಗಾ ಜಿಪಂ ಸದಸ್ಯರಾಗಿದ್ದ ಮಾನ್ಪಡೆ ಜನಸಾಮಾನ್ಯರ ಕಣ್ಮಣಿಯಾಗಿದ್ದರು.
65 ವರ್ಷ ಪ್ರಾಯದ ಮಾನ್ಪಡೆ ಅವರ ನಿಧನ, ರೈತ, ಕಾರ್ಮಿಕ, ಗ್ರಾಪಂ ನೌಕರರ ಚಳುವಳಿಗೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬದವರಿಗೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ಬರಲಿ ಎಂದು ಸಿಪಿಎಂ ಜಿಲ್ಲಾ ಸಮಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News