ಕಸ ವಿಂಗಡನೆ ಬಗ್ಗೆ ಜಾಗೃತಿ: ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ

Update: 2020-10-20 15:19 GMT

ಮಂಗಳೂರು, ಅ.20: ನಗರದಲ್ಲಿ ಕಸ ವಿಂಗಡನೆ ಕಡ್ಡಾಯಗೊಳಿಸಲಾಗಿದ್ದು ಇದನ್ನು ಯಶಸ್ವಿಗೊಳಿಸಲು ಎಂಪಿಡಬ್ಲ್ಯುಗಳು, ವಾಲ್ವ್‌ಮನ್‌ಗಳು ಮನೆ ಮನೆಗೆ ತೆರಳಿ ಜನರನ್ನು  ಜಾಗೃತಗೊಳಿಸುವ ಕಾರ್ಯ ಪ್ರಾರಂಭಿಸಲಾಗುವುದು ಎಂದು ಮಂಗಳೂರು ಮೇಯರ್ ದಿವಾಕರ ಪಾಂಡೇಶ್ವರ ತಿಳಿಸಿದ್ದಾರೆ.

ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ಕುರಿತಂತೆ ಕಾರ್ಪೊರೇಟರ್‌ಗಳು, ಅಧಿಕಾರಿಗಳೊಂದಿಗೆ ಮಂಗಳವಾರ ಅವರು ಸಭೆ ನಡೆಸಿ ಮಾತನಾಡಿದರು.

ಕಾರ್ಪೊರೇಟರ್‌ಗಳು, ಅಧಿಕಾರಿಗಳು ಈ ಬಗ್ಗೆ ಪರಸ್ಪರ ಸಹಕಾರದಿಂದ ನೀಡಬೇಕು ಎಂದ ಮೇಯರ್, ಆ್ಯಂಟನಿ ವೇಸ್ಟ್ ಸಂಸ್ಥೆಯವರಿಗೆ ಸರಿಯಾದ ಸೂಚನೆಗಳನ್ನು ಅಧಿಕಾರಿಗಳು ನೀಡಬೇಕು, ಎಲ್ಲೂ ಕಸ ವಿಲೇವಾರಿಗೆ ವಾಹನ ಬಾರದಿರುವ ಬಗ್ಗೆ ಜನರಿಂದ ದೂರುಗಳು ಬರಬಾರದು ಎಂದರಲ್ಲದೆ ಈ ಕುರಿತು ಆ್ಯಂಟನಿ ವೇಸ್ಟ್‌ನ ಎಲ್ಲಾ ಮೇಲ್ವಿಚಾರಕರನ್ನೂ ಕರೆದು ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡುವಂತೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಸೂಚಿಸಿದರು.

ಆಯುಕ್ತ ಅಕ್ಷಿ ಶ್ರೀಧರ್ ಮಾತನಾಡಿ, ನಗರದಲ್ಲಿ ಆದಷ್ಟೂ ಹಸಿ ಕಸವನ್ನು ಜನರೇ ತಮ್ಮ ಮನೆಗಳಲ್ಲಿ ವಿಲೇವಾರಿ ಮಾಡಿದರೆ ಉತ್ತಮ, ಇದರಿಂದ ವ್ಯವಸ್ಥೆ ಮೇಲೆ ಒತ್ತಡ ಬರುವುದಿಲ್ಲ. ಅಪಾರ್ಟ್‌ಮೆಂಟ್‌ಗಳಲ್ಲಿ ಕಾಂಪೋಸ್ಟಿಂಗ್ ಘಟಕಗಳನ್ನು ನಿರ್ಮಿಸುವುದಾದರೆ ಶೇ.50ರ ರಿಯಾಯಿತಿ ಈಗ ಘೋಷಿಸಿದಂತೆ ನೀಡಲಾಗುತ್ತದೆ ಎಂದರು.

ಹಲವು ಕಾರ್ಪೊರೇಟರ್‌ಗಳು ಈ ರಿಯಾಯಿತಿಯನ್ನು ಶೇ.75ರಷ್ಟು ನೀಡಬೇಕು ಎಂದು ಒತ್ತಾಯಿಸಿದರು, ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹಸಿ ಕಸ ವಿಲೇವಾರಿ ಮಾಡಿದರೂ ಒಣ ಕಸ ಸಂಗ್ರಹಕ್ಕೆ ವಾಹನ ಹೋಗುವುದರಿಂದ ಖರ್ಚು ಬೀಳುತ್ತದೆ, ಹಾಗಾಗಿ  ಸದ್ಯ ಬದಲಾವಣೆ ಸಾಧ್ಯವಿಲ್ಲ ಎಂದು ಆಯುಕ್ತ ರು ತಿಳಿಸಿದರು.

ಕಸ ಸಂಗ್ರಹ ಅಸಮರ್ಪಕ: ದೂರು

ನಗರದ ಹಲವು ವಾರ್ಡ್‌ಗಳಲ್ಲಿ ಆ್ಯಂಟನಿ ವೇಸ್ಟ್ ಸಂಸ್ಥೆಯವರು ಪ್ರತ್ಯೇಕಿಸಿ ಇರಿಸಲಾದ ಕಸವನ್ನೇ ಸರಿಯಾಗಿ ಸಂಗ್ರಹ ಮಾಡುತ್ತಿಲ್ಲ, ಕೆಲವೆಡೆಗೆ ಪ್ರತಿದಿನ ಬರುತ್ತಿಲ್ಲ ಎಂಬ ದೂರುಗಳು ಕೇಳಿಬಂದವು.

ಕಾಂಗ್ರೆಸ್‌ನ ಪ್ರವೀಣಚಂದ್ರ ಆಳ್ವ, ವಿನಯ್ ರಾಜ್  ಮತ್ತಿತರರು ಮಾತನಾಡಿ, ಜನರು ನಿಯಮವನ್ನು ಅರಿತುಕೊಳ್ಳುತ್ತಿದ್ದಾರೆ, ಆದರೆ ಕಸ ಸಂಗ್ರಹಿಸುವವರೇ ಸರಿಯಾಗಿ ಬಾರದಿದ್ದರೆ ವ್ಯವಸ್ಥೆ ಯಶಸ್ವಿಯಾಗದು ಎಂದು ಅಭಿಪ್ರಾಯಿಸಿದರು.

ಇದುವರೆಗೆ ಜನರು ಕಸವನ್ನು ಪ್ಲಾಸ್ಟಿಕ್‌ನಲ್ಲಿ ಕಟ್ಟಿ ನೀಡುತ್ತಿದ್ದು, ಈಗ ಹಾಗೆ ನೀಡುವಂತಿಲ್ಲ. ಇದಕ್ಕೆ ಪೂರಕವಾಗಿ ಜನರಿಗೆ ಮೂರು ಬಗೆಯ ಬಕೆಟ್‌ಗಳನ್ನು ನೀಡಿ ಅವರೇ ಕಸ ಪ್ರತ್ಯೇಕಿಸಿ ನೀಡುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕಾಂಗ್ರಸ್‌ನ ಶಶಿಧರ ಹೆಗ್ಡೆ ಸಲಹೆ ನೀಡಿದರು. ಈ ಸಂದರ್ಭ ಉಪಮೇಯರ್ ವೇದಾವತಿ ಹಾಜರಿದ್ದರು.

ಪಚ್ಚನಾಡಿಗೆ ಇಂದೋರ್ ಮಾದರಿ

ಪಚ್ಚನಾಡಿಯಲ್ಲಿರುವ 9 ಲಕ್ಷ ಟನ್ ಕಸವನ್ನು ಬಯೋಮೈನಿಂಗ್ ಮೂಲಕ ವಿಲೇವಾರಿಗೆ ಮಧ್ಯಪ್ರದೇಶದ ಇಂದೋರ್ ನಗರದ ಮಾದರಿಗೆ ಚಿಂತಿಸಲಾಗಿದೆ. ಈ ಕುರಿತು ಯೋಜನೆ ರೂಪಿಸಿ 16.2 ಕೋಟಿ ರೂ.ನ ಪ್ರಸ್ತಾವನೆಯನ್ನು ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸಲಾಗಿದೆ ಎಂದು ಪರಿಸರ ಇಂಜಿನಿಯರ್ ಮಧು ಮಾಹಿತಿ ನೀಡಿದರು. ಪ್ರಸ್ತಾವನೆಯನ್ನು ತಾಂತ್ರಿಕ ಸಮಿತಿ ಅನುಮೋದನೆ ಬಳಿಕ ಪಾಲಿಕೆಯ ಪರಿಷತ್‌ಗೆ ಅನುಮೋದನೆಗೆ ಸಲ್ಲಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News