​ಸ್ನಾತಕೋತ್ತರ ವಿದ್ಯಾರ್ಥಿನಿ ಅಪಹರಣ ಪ್ರಕರಣ: ಆರೋಪಿಗೆ ನಿರೀಕ್ಷಣಾ ಜಾಮೀನು

Update: 2020-10-20 15:51 GMT

ಮಂಗಳೂರು, ಅ.20: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯ ಅಪಹರಣ ಪ್ರಕರಣದ ಆರೋಪಿಗೆ ಮಂಗಳೂರು ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ. ಆರೋಪಿ ಮಡಿಕೇರಿ ನಿವಾಸಿ ಮುರಳಿರಾಜ್ ನಿರೀಕ್ಷಣಾ ಜಾಮೀನು ಪಡೆದವರು.

ಘಟನೆ ವಿವರ: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ಪದವಿ (ಎಂ.ಎಸ್ಸಿ) ಓದುತ್ತಿದ್ದ ವಿದ್ಯಾರ್ಥಿನಿ ಕೊನೆಯ ಪರೀಕ್ಷೆ ಬರೆಯಲು ಸೆ.22ರಂದು ಕಾಲೇಜಿಗೆ ಆಗಮಿಸಿದ್ದರು. ಪರೀಕ್ಷೆ ಬರೆದು ಮನೆಗೆ ವಾಪಸಾಗುತ್ತಿದ್ದಾಗ ಆರೋಪಿ ಮುರಳಿರಾಜ್ ಸಹಿತ ಹಲವರು ಕಾರಿನಲ್ಲಿ ಅಪಹರಣ ಮಾಡಿರುವುದಾಗಿ ಸಂತ್ರಸ್ತೆಯ ತಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈ ಮಧ್ಯೆ, ಆರೋಪಿ ಮಡಿಕೇರಿ ನಿವಾಸಿ ಮುರಳಿರಾಜ್ ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆರೋಪಿ ಪರ ವಾದ ಆಲಿಸಿದ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಪಲ್ಲವಿ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿ ಪರ ನ್ಯಾಯವಾದಿ ಸುಕೇಶ್‌ಕುಮಾರ್ ಶೆಟ್ಟಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News