ಹತ್ರಸ್ ಪ್ರಕರಣ ಭಾರತ ತಲೆ ತಗ್ಗಿಸುವಂತಹ ಘಟನೆ: ಬಿ.ಎಂ.ಭಟ್

Update: 2020-10-20 18:24 GMT

ಬೆಳ್ತಂಗಡಿ,ಅ.20: ಉತ್ತರ ಪ್ರದೆಶದ ಹತ್ರಸ್ ನಲ್ಲಿ ದಲಿತ ಹುಡುಗಿ ಸಾಮೂಹಿಕ ಅತ್ಯಾಚಾರ, ಕೊಲೆ ಹಾಗೂ ಕಾನೂನು ಬಾಹಿರವಾಗಿ ದಹನ ನಡೆಸಿ ಸಾಕ್ಷಿಗಳ ನಾಶ ಮಾಡಿದ ಬಿಜೆಪಿ ಸರಕಾರದ ದೋರಣೆ ಭಾರತೀಯರನ್ನು ತಲೆ ತಗ್ಗಿಸುವಂತೆ ಮಾಡಿದೆ ಎಂದು ಹಿರಿಯ ಕಮ್ಯೂನಿಸ್ಟ್ ನಾಯಕ ಬಿ.ಎಂ.ಭಟ್ ಹೇಳಿದ್ದಾರೆ.

ಅವರು ಇಂದು ದಲಿತ ಹಕ್ಕುಗಳ ರಕ್ಷಣಾ ಸಮಿತಿ, ಜನವಾದಿ ಮಹಿಳಾ ಸಂಘಟನೆ, ಭಗತ್ ಸಿಂಗ್ ಯುವಕೇಂದ್ರ, ನೇತೃತ್ವದಲ್ಲಿ ನಡೆದ  ಹತ್ರಸ್ ಪ್ರಕರಣ ಖಂಡಿಸಿ ಬೆಳ್ತಂಗಡಿ ಮಿನಿವಿಧಾನ ಸೌದ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತಾಡುತ್ತಿದ್ದರು. ದೇಶದ ಕಾನೂನಿಗೆ ಗೌರವ ನೀಡದೆ, ಕಾನೂನು ಉಲ್ಲಂಘಿಸಿ, ಸಂವಿಧಾನ ವಿರೋದಿಯಾಗಿ ನಡೆಯುವುದೆಂದರೆ ಅದು ದೇಶದ್ರೋಹದ ಕೆಲಸ ಆಗಿದೆ. ಉತ್ತರ ಪ್ರದೇಶ ಸರಕಾರ ಆರೋಪಿಗಳ ಪರ ನಿಂತು ಕಾನೂನು ವಿರೋಧಿಯಾಗಿ, ಮನುಷ್ಯತ್ವ ವಿರೋಧಿಯಾಗಿ ನಡೆಯುತ್ತಿರುವುದು ಖಂಡನೀಯ ಎಂದರು.

ದಲಿತ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ನೋಡುವಾಗ ಬಿಜೆಪಿ ಸರಕಾರ  ಮಹಿಳೆಯರ ಮೇಲೆ ಕಾಳಜಿ ಹೊಂದಿಲ್ಲ ಎಂಬುದು ಸ್ಪಷ್ಟ. ಬಿಜೆಪಿ ಹಿಂದುಗಳು ನಾವಲ್ಲ. ಭಾರತದ ನೈಜ ಹಿಂದು ಧರ್ಮದ ನಿಜವಾದ ಶತ್ರುಗಳೆಂದರೆ ಅದು ಬಿಜೆಪಿ ಹಾಗೂ ಸಂಘಪರಿವಾರವೇ ಆಗಿದೆ ಎಂದರು.

ದಲಿತ ಸೇವಾ ಸಮಿತಿಯ ಜಿಲ್ಲಾ ಅದ್ಯಕ್ಷರಾದ ಸೇಸಪ್ಪ ಬೆದ್ರಕಾಡು ಮಾತನಾಡಿ, ಹತ್ರಸ್ ಪ್ರಕರಣದ ಆರೋಪಿಗಳ ರಕ್ಷಣೆಗೆ ನಿಂತ ಬಿಜೆಪಿ ವಿರುದ್ಧ ಮಹಿಳೆಯರು ಒಟ್ಟಾಗಿ ದ್ವನಿ ಎತ್ತಬೇಕು ಎಂದರು. 

ದಲಿತ ಹಕ್ಕು ರಕ್ಷಾಣಾ ಸಮಿತಿಯ ಈಶ್ವರಿ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಳ್ತಂಗಡಿ ತಾಲೂಕು ಶಾಖೆಯ ಸಂಚಾಲಕರಾದ ನೇಮಿರಾಜ್ ಕಿಲ್ಲೂರು, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಮುಖಂಡರಾದ ಕಿರಣಪ್ರಭಾ,  ಮಾತಾಡಿದರು.  ನಲಿಕೆ ಸೇವಾಸಮಾಜದ ಅದ್ಯಕ್ಷರಾದ ಪ್ರಭಾಕರ್,  ಕಾರ್ಮಿಕ ಮುಖಂಡರುಗಳಾದ ಮಂಜುನಾಥ್, ನಾರಾಯಣ ಕೈಕಂಬ, ರಾಮಚಂದ್ರ, ನೆಬಿಸಾ, ಜಯರಾಮ ಮಯ್ಯ, ಪುಷ್ಪಾ, ಸುಜಾತ, ಮಹಿಳಾ ನಾಯಕಿ ಅಪ್ಪಿ, ಆದಿವಾಸಿ ಸಂಘಟನೆಯ ಚನಿಯಪ್ಪ ಎಂ.ಕೆ, ದಲಿತ ಹಕ್ಕು ರಕ್ಷಾಣ ಸಮಿತಿಯ ತಾಲೂಕು ಅದ್ಯಕ್ಷರಾದ ಬಾಬು ಕೊಯ್ಯೂರು, ಮೊದಲಾದವರು ಉಪಸ್ಥಿತರಿದ್ದರು.

ರೈತ ಮುಖಂಡ ಶ್ಯಾಮರಾಜ್ ಪಟ್ರಮೆ ಸ್ವಾಗತಿಸಿದರು. ಜಯಶ್ರೀ ಕಳೆಂಜ ವಂದಿಸಿದರು. ಪ್ರತಿಭಟನೆಯ ಬಳಿಕ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News