ಮಂಗಳೂರು: ಪೊಲೀಸ್ ಹುತಾತ್ಮ ದಿನಾಚರಣೆ

Update: 2020-10-21 12:03 GMT

ಮಂಗಳೂರು, ಅ.21: ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ಮತ್ತು ದ.ಕ.ಜಿಲ್ಲಾ ಪೊಲೀಸ್ ವತಿಯಿಂದ ಬುಧವಾರ ನಗರದ ಸಶಸ್ತ್ರ ಮೀಸಲು ಪಡೆ ಕಚೇರಿಯ ಆವರಣದಲ್ಲಿ ಪೊಲೀಸ್ ಹುತಾತ್ಮರ ದಿನ ಆಚರಿಸಲಾಯಿತು.

ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಸಂಕಷ್ಟದ ಕಾಲದಲ್ಲಿ ಪೊಲೀಸರು ಸದಾ ಪ್ರಾಣವನ್ನು ಒತ್ತೆಯಿಟ್ಟು ಕರ್ತವ್ಯ ನಿರ್ವಹಿಸುವುದರಲ್ಲಿ ಮುಂಚೂಣಿಯಲ್ಲಿದ್ದರು. ತುರ್ತು ರಕ್ಷಣೆ, ಸೇವೆಯು ಪೊಲೀಸ್ ಇಲಾಖೆಯ ಪ್ರಮುಖ ಜವಾಬ್ದಾರಿಯೂ ಆಗಿದೆ. ಇದನ್ನು ಮನಗಂಡೇ ಕೋವಿಡ್ 19 ಸಂದರ್ಭವೂ ಪೊಲೀಸರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಕೊಂಡು ಕೆಲಸ ನಿರ್ವಹಿಸಿದ್ದನ್ನು ಮರೆಯಲು ಸಾಧ್ಯ ಇಲ್ಲ ಎಂದರು.

ಕೊರೋನ ಅವಧಿಯಲ್ಲಿ ಪೊಲೀಸರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಹಲವು ಮಂದಿ ಕೊರೋನ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದಾರೆ ಎಂದ ಐಜಿಪಿ ದೈಹಿಕ ವ್ಯಾಯಾಮ, ಪೌಷ್ಠಿಕ ಆಹಾರ ಸೇವಿಸುವ ಮೂಲಕ ಆರೋಗ್ಯವನ್ನು ಕಾಯ್ದುಕೊಂಡು ಸಮಾಜದ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ದೇಶದಲ್ಲಿ ಈ ವರ್ಷ 264 ಪೊಲೀಸರು ಕರ್ತವ್ಯ ನಿರತರಾಗಿದ್ದಾಗ ಮೃತಪಟ್ಟಿದ್ದಾರೆ. ಈ ಪೈಕಿ 17 ಮಂದಿ ಕರ್ನಾಟಕದವರು ಎಂದ ಜಿಲ್ಲಾ ಎಸ್ಪಿ ಬಿಎಂ ಲಕ್ಷ್ಮಿಪ್ರಸಾದ್ ಮೃತರ ಹೆಸರುಗಳನ್ನು ವಾಚಿಸಿದರು. ಪ್ರೊಬೆಷನರಿ ಐಪಿಎಸ್ ಅಧಿಕಾರಿ ರೋಹನ್ ಜಗದೀಶ್ ಹುತಾತ್ಮ ದಿನದ ಪರೇಡ್‌ನ ನೇತೃತ್ವ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ಡಿಸಿಪಿ ವಿನಯ ಗಾಂವ್ಕರ್, ಕೋಸ್ಟ್‌ಗಾರ್ಡ್ ಡಿಐಜಿ ಎಸ್‌ಬಿ ವೆಂಕಟೇಶ್, ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಮುರಲಿ ಮೋಹನ ಚೂಂತಾರು ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News