ಉಪ್ಪಿನಂಗಡಿ: ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿದ್ದ ಅನಧಿಕೃತ ಅಂಗಡಿಗಳ ಕಾರ್ಯಾಚರಣೆ

Update: 2020-10-21 10:11 GMT

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿದ್ದ ಅನಧಿಕೃತ ಅಂಗಡಿಗಳ ಕಾರ್ಯಾಚರಣೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮತ್ತು 34 ನೆಕ್ಕಿಲಾಡಿ ಗ್ರಾ.ಪಂ.ನ ಆಡಳಿತಾಧಿಕಾರಿಯಾಗಿರುವ ನವೀನ್ ಭಂಡಾರಿ ಅವರ ನೇತೃತ್ವದಲ್ಲಿ ಬುಧವಾರ ನಡೆಯಿತು. 

ಅಂಗಡಿ ಕಳೆದುಕೊಂಡು ನಿರಾಶ್ರಿತರಾದವರಿಗೆ ತಳ್ಳುಗಾಡಿಯಲ್ಲಿ ಅಧಿಕೃತ ವ್ಯಾಪಾರ ನಡೆಸಲು ಅವಕಾಶ ನೀಡಲು ಅಧಿಕಾರಿಗಳು ತೀರ್ಮಾನಿಸಿದ್ದು, ಗ್ರಾ.ಪಂ.ನ ಸಂತೆಕಟ್ಟೆ ಮೈದಾನದಲ್ಲಿ ಇದೇ ವೇಳೆ ಇದಕ್ಕಾಗಿ ಸ್ಥಳ ಗುರುತು ಕೂಡಾ ಹಾಕಲಾಯಿತು.

34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ರಸ್ತೆಗಳ ಬದಿ ಹಲವು ಅಂಗಡಿಗಳು ಅನಧಿಕೃತವಾಗಿ ತಲೆಯೆತ್ತಿದ್ದವು. ಇದರಿಂದಾಗಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆಯಾಗುವ ಕುರಿತು ಹಾಗೂ ಪರಿಸರ ಅಸ್ವಚ್ಛತೆಗೆ ಕಾರಣವಾಗುವ ಕುರಿತು ಗ್ರಾ.ಪಂ.ಗೆ ದೂರುಗಳು ಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ 34 ನೆಕ್ಕಿಲಾಡಿ ಗ್ರಾ.ಪಂ.ನ ಆಡಳಿತಾಧಿಕಾರಿ ನವೀನ್ ಭಂಡಾರಿಯವರು ಕೆಲವು ದಿನಗಳ ಹಿಂದೆ ಅನಧಿಕೃತ ಅಂಗಡಿಗಳವರ ಸಭೆ ಕರೆದು, ಅ.21ರೊಳಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದರು. ತೆರವುಗೊಳಿಸದಿದ್ದಲ್ಲಿ ಅ.21ರಂದು ಗ್ರಾ.ಪಂ.ನಿಂದಲೇ ತೆರವುಗೊಳಿಸುವುದಾಗಿ ಎಚ್ಚರಿಸಿದ್ದರು. ಅಲ್ಲದೇ, ಅನಧಿಕೃತ ಅಂಗಡಿದಾರರು ಈಗಿರುವ ಅಂಗಡಿಗಳನ್ನು ತೆರವುಗೊಳಿಸಿ, ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುವುದಿದ್ದರೆ ಅವರಿಗೆ ಸಂತೆಕಟ್ಟೆ ಮೈದಾನದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದೆಂದು ತಿಳಿಸಿದ್ದರು.

ಇವರ ಮಾತಿಗೆ ಮನ್ನಣೆಕೊಟ್ಟ ಕೆಲವು ಅನಧಿಕೃತ ಅಂಗಡಿಗಳವರು ತೆರವು ಕಾರ್ಯಾಚರಣೆ ಮೊದಲೇ ಅಂಗಡಿಗಳನ್ನು ತೆರವುಗೊಳಿಸಿ ತೆರಳಿದರು. 

ಬೆಳಗ್ಗಿನಿಂದಲೇ ತೆರವು ಕಾರ್ಯಾಚರಣೆ: ಬೆಳಗ್ಗೆ ಸುಮಾರು 8:30ಕ್ಕೆ ಜೆಸಿಬಿಯೊಂದಿಗೆ ಬಂದ ಗ್ರಾ.ಪಂ. ಅಧಿಕಾರಿಗಳು ಮಧ್ಯಾಹ್ನ ತನಕ ಗ್ರಾ.ಪಂ. ವ್ಯಾಪ್ತಿಯಿಡೀ ಸಂಚರಿಸಿ ಎಲ್ಲಾ ಕಡೆ ಇದ್ದ ಒಟ್ಟು 13 ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿದರು. ಅಲ್ಲಿಯವರೆಗೆ ಸುಮ್ಮನಿದ್ದ ಕೆಲವು ಅಂಗಡಿಯವರು ಅಧಿಕಾರಿಗಳನ್ನು ಕಂಡ ಕೂಡಲೇ ತಮ್ಮ ಅಂಗಡಿಗಳನ್ನು ತಾವೇ ತೆರವು ಮಾಡಲು ಮುಂದಾದರು. ಸ್ಥಳಕ್ಕೆ ಬಂದ ಅಧಿಕಾರಿಗಳಲ್ಲಿ ನಾವೇ ತೆರವು ನಡೆಸುತ್ತೇವೆಂದು ವಿನಂತಿಸಿದರು. ಅವರಿಗೆ ಸ್ವಲ್ಪ ಕಾಲ ಅವಕಾಶ ಕೊಟ್ಟ ಗ್ರಾ.ಪಂ. ಅಧಿಕಾರಿಗಳು ಅವರು ಅಂಗಡಿಗಳನ್ನು ತೆಗೆಯಲು ಮತ್ತೂ ವಿಳಂಬ ಮಾಡಿದ್ದರಿಂದ ಜೆಸಿಬಿ ಮೂಲಕ ಅವುಗಳನ್ನು ನೆಲಸಮಗೊಳಿಸಿದರು. ಇದರಿಂದ ಸಿಮೆಂಟ್ ಶೀಟ್, ಟಾರ್ಫಾಲಿನ್, ಕಂಬಗಳು ಹಾನಿಯಾಗುವಂತಾಯಿತು. 

ಸಾರ್ವಜನಿಕರ ಪ್ರಶಂಸೆ: ಇಂದಿನ ತೆರವು ಕಾರ್ಯಾಚರಣೆಗೆ ಅನಧಿಕೃತ ವ್ಯಾಪಾರಸ್ಥರಿಂದ ಹೆಚ್ಚಿನ ಆಕ್ಷೇಪವೇನೂ ಕೇಳಿ ಬರಲಿಲ್ಲ. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ಅಂಗಡಿಗಳ ತೆರವಿನಿಂದ ನಿರಾಶ್ರಿತರಾದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದು ಹಾಗೂ ಯಾವುದೇ ಪಕ್ಷಪಾತ ಮಾಡದೇ ಎಲ್ಲಾ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.  

ಮಾತಿನ ಚಕಮಕಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬದಿ ಗ್ಯಾರೇಜ್ ಮಾಲಕ, ಬಿಜೆಪಿ ಮುಖಂಡ ಸದಾನಂದ ಎಂಬವರು ತನ್ನ ಗ್ಯಾರೇಜ್‍ಗೆ ಬಂದ ಕಾರುಗಳನ್ನು ನಿಲ್ಲಿಸಿದ್ದು, ಇದನ್ನು ತೆರವು ಮಾಡಲು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸದಾನಂದ ಅವರಿಗೆ ಸೂಚಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಾನಂದ ಅವರು ಇಲ್ಲಿ ಎಲ್ಲವೂ ನನ್ನ ಗ್ಯಾರೇಜ್‍ಗೆ ಬಂದ ಕಾರುಗಳಲ್ಲ. ನಾನು ಕಾರುಗಳನ್ನು ತೆಗೆಯುವುದಿಲ್ಲ. ಹೈವೆ ಪ್ರಾಧಿಕಾರದ ಅಧಿಕಾರಿಗಳಿಗೆ ಹೇಳಿಯೇ ನಾನು ಇಲ್ಲಿ ಕಾರುಗಳನ್ನು ನಿಲ್ಲಿಸುತ್ತಿದ್ದೇನೆ. ಇಲ್ಲಿ ಹೆದ್ದಾರಿ ಮಾರ್ಜಿನ್‍ನಲ್ಲೇ ದೊಡ್ಡ ಕಟ್ಟಡವೊಂದನ್ನು ನಿರ್ಮಿಸಲಾಗಿದೆ. ಅದ್ಯಾಕೆ ನಿಮಗೆ ಕಾಣಿಸುವುದಿಲ್ಲ. ಯಾರದೋ ಒತ್ತಡಕ್ಕೆ ಸಿಲುಕಿ ನನ್ನಲ್ಲಿ ಬಂದು ಕಾರುಗಳನ್ನು ತೆಗೆಯಲು ಹೇಳಬೇಡಿ. ನಾನು ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು. ಇದು ಇಬ್ಬರೊಳಗೆ ಮಾತಿನ ಚಕಮಕಿಗೂ ಕಾರಣವಾಯಿತು.

ಈ ತೆರವು ಕಾರ್ಯಾಚರಣೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ, 34 ನೆಕ್ಕಿಲಾಡಿ ಗ್ರಾ.ಪಂ.ನ ಆಡಳಿತಾಧಿಕಾರಿ ನವೀನ್ ಭಂಡಾರಿ, 34 ನೆಕ್ಕಿಲಾಡಿ ಪಿಡಿಒ ಜಯಪ್ರಕಾಶ್, ಕಾರ್ಯದರ್ಶಿ ಕುಮಾರಯ್ಯ, ಉಪ್ಪಿನಂಗಡಿ ಗ್ರಾ.ಪಂ. ಪ್ರಭಾರ ಪಿಡಿಒ ವಿಲ್ಫ್ರೆಡ್ ರೋಡ್ರಿಗಸ್ ಇದ್ದರು. ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಗೆ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪ ನಿರೀಕ್ಷಕ ಈರಯ್ಯ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಯಿತು.

34 ನೆಕ್ಕಿಲಾಡಿಯಲ್ಲಿ ಅನಧಿಕೃತ ಅಂಗಡಿಗಳಿಂದ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕ ದೂರುಗಳು ಬಂದಿತ್ತು. ಅದನ್ನೆಲ್ಲಾ ಈಗ ತೆರವುಗೊಳಿಸಲಾಗಿದೆ. ಇನ್ನು ಅನಧಿಕೃತ ಅಂಗಡಿಗಳ ಬಗ್ಗೆ ಸಾರ್ವಜನಿಕ ದೂರುಗಳು ಬಂದಲ್ಲಿ ಅದನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು. ಇಲ್ಲಿದ್ದ ಅನಧಿಕೃತ ಅಂಗಡಿಗಳವರನ್ನು ಈಗಾಗಲೇ ಸಭೆ ಕರೆದು ಅವರಿಗೆ ವ್ಯಾಪಾರ ನಡೆಸಲು ಬದಲಿ ವ್ಯವಸ್ಥೆ ಮಾಡುತ್ತೇವೆಂದು ತಿಳಿಸಿದ್ದೇವೆ. ಇದಕ್ಕಾಗಿ ಸಂತೆಕಟ್ಟೆ ಮೈದಾನದಲ್ಲಿ ಸ್ಥಳ ಗುರುತು ಮಾಡಲಾಗಿದ್ದು, ಅಲ್ಲಿಗೆ ಹೋಗಿ ವ್ಯಾಪಾರ ನಡೆಸಲು ಇಚ್ಚಿಸುವವರು ಸ್ವಚ್ಛತೆಗೆ ಆದ್ಯತೆ ನೀಡಿ ಗ್ರಾ.ಪಂ.ನ ನಿಯಮಕ್ಕೆ ಬದ್ಧರಾಗಿ ವ್ಯಾಪಾರ ನಡೆಸಲು ಅವಕಾಶ ನೀಡಲಾಗುವುದು.
- ನವೀನ್ ಭಂಡಾರಿ,
ಕಾರ್ಯನಿರ್ವಹಣಾಧಿಕಾರಿ ತಾ.ಪಂ. ಪುತ್ತೂರು, ಆಡಳಿತಾಧಿಕಾರಿ 34 ನೆಕ್ಕಿಲಾಡಿ

ತಳ್ಳುಗಾಡಿ ವ್ಯಾಪಾರ ನಡೆಸುವವರಿಗೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಸಂತೆಕಟ್ಟೆ ಮೈದಾನದಲ್ಲಿ ಸ್ಥಳ ಗುರುತಿಸಲಾಗಿದೆ. ಇಲ್ಲಿ ಅನಧಿಕೃತ ಅಂಗಡಿಗಳನ್ನು ಹಾಕಿಕೊಂಡಿದ್ದ 34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಜನರಿಗೆ ಇಲ್ಲಿ ಮೊದಲ ಆದ್ಯತೆ ನೀಡಲಾಗುವುದು. ಬಳಿಕ ಇಲ್ಲಿ ಅನಧಿಕೃತ ಅಂಗಡಿಗಳನ್ನು ಹಾಕಿಕೊಂಡಿದ್ದ ಇತರ ಗ್ರಾ.ಪಂ. ನಿವಾಸಿಗಳಿಗೆ ನೀಡಲಾಗುವುದು. ಇಲ್ಲಿ ತಳ್ಳುಗಾಡಿಯನ್ನಿಟ್ಟು ವ್ಯಾಪಾರ ನಡೆಸಲು ಮಾತ್ರ ಅವಕಾಶ ನೀಡಲಾಗುವುದು. ಬೆಳಗ್ಗೆ ತಳ್ಳುಗಾಡಿಗಳನ್ನು ತಂದು ರಾತ್ರಿ ಇಲ್ಲಿಂದ ಕೊಂಡು ಹೋಗಬೇಕು. ಸಿಮೆಂಟ್ ಶೀಟ್, ಟಾರ್ಪಾಲಿನ್ ಹಾಕಲು ಇಲ್ಲಿ ಅವಕಾಶವಿಲ್ಲ. ಇಲ್ಲಿ ವ್ಯಾಪಾರ ನಡೆಸುವವರು ದಿನಂಪ್ರತಿ ಗ್ರಾ.ಪಂ. ನಿಗದಿಪಡಿಸಿದ ಸ್ವಚ್ಛತಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೀಗೆ ಗ್ರಾ.ಪಂ.ನ ನಿಯಮಗಳಿಗೆ ಬದ್ಧರಾಗಿ ವ್ಯಾಪಾರ ನಡೆಸುವವರಿಗೆ ಮಾತ್ರ ಇಲ್ಲಿ ಅವಕಾಶ ನೀಡಲಾಗುವುದು.

- ಜಯಪ್ರಕಾಶ್
ಪಿಡಿಒ, 34 ನೆಕ್ಕಿಲಾಡಿ ಗ್ರಾ.ಪಂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News