ಉಡುಪಿಯನ್ನು ಮಾದಕ ದ್ರವ್ಯ ಮುಕ್ತ ಜಿಲ್ಲೆಯನ್ನಾಗಿಸಿ: ಡಿಸಿ ಜಗದೀಶ್

Update: 2020-10-21 13:05 GMT

ಉಡುಪಿ, ಅ.21: ಜಿಲ್ಲೆಯಲ್ಲಿ ಮಾದಕ ದ್ರವ್ಯ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಸಾಕಷ್ಟು ಶ್ರಮಿಸುತ್ತಿದೆ. ಈ ಮೂಲಕ ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಈ ದಂಧೆಗೆ ಕಡಿವಾಣ ಹಾಕುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಮುಂದೆ ಇದರಲ್ಲಿ ತೊಡಗಿಸಿ ಕೊಂಡಿರುವ ಸಮಾಜಘಾತಕ ಶಕ್ತಿಗಳನ್ನು ಮಟ್ಟ ಹಾಕುವುದರೊಂದಿಗೆ ಇಡೀ ಉಡುಪಿಯನ್ನು ಮಾದಕ ದ್ರವ್ಯ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಚಂದು ಮೈದಾನ ಬಳಿಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕೇಂದ್ರಸ್ಥಾನದಲ್ಲಿ ಬುಧವಾರ ಆಯೋಜಿಸಲಾದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಮುಖ್ಯ ಅತಿಥಿ ಯಾಗಿ ಅವರು ಮಾತನಾಡುತಿದ್ದರು.

ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲೆಯ ಗಡಿಗಳನ್ನು ಬಂದ್ ಮಾಡಿದಾಗ ಪೊಲೀಸರು ನಿರ್ವಹಿಸಿದ ಕರ್ತವ್ಯ ಪ್ರಜ್ಞೆ ಶ್ಲಾಘನೀಯ. ಇಂದು ನಾವು ಕೊರೋನಾದಿಂದ ಸಾಕಷ್ಟು ಸುರಕ್ಷಿತವಾಗಿರಲು ಆರಂಭ ದಿನಗಳಲ್ಲಿ ಜಿಲ್ಲಾ ಡಳಿತ ಮತ್ತು ಪೊಲೀಸ್ ಇಲಾಖೆ ಒಟ್ಟಿಗೆ ಕೆಲಸ ಮಾಡಿರುವುದೇ ಕಾರಣ. ಉಡುಪಿಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹ ಸಮಯದಲ್ಲಿಯೂ ಜನರ ಜೀವವನ್ನು ಉಳಿಸುವ ನಿಟ್ಟಿನಲ್ಲಿ ಪೊಲೀಸರು ರಾತ್ರಿ ಹಗಲು ಶ್ರಮಿಸಿದ್ದಾರೆ ಎಂದು ಅವರು ತಿಳಿಸಿದರು.

ಪೊಲೀಸರು ಹಗಲಿರುಳು ಕರ್ತವ್ಯ ನಿರ್ವಹಿಸುವುದರಿಂದ ಸಮಾಜ ನೆಮ್ಮದಿ ಯಾಗಿ ಇರಲು ಸಾಧ್ಯ. ಯಾವುದೇ ರೀತಿಯ ಕಷ್ಟದ ಪರಿಸ್ಥಿತಿ ಎದುರಾದರೂ ಮೊದಲಿಗೆ ನೆನಪಿಗೆ ಬರುವುದು ಪೊಲೀಸರು. ಸಮಾಜದ ರಕ್ಷಣೆಗಾಗಿ ಪೊಲೀಸರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು, ಇದನ್ನು ಕಡಿಮೆ ಮಾಡಲು ಒತ್ತಡ ನಿರ್ವಹಣೆಯ ಕಲೆಯನ್ನು ರೂಢಿಸಿಕೊಳ್ಳಬೇಕು. ಪೊಲೀಸರ ಆರೋಗ್ಯ ಸದೃಢವಾಗಿದ್ದರೆ ಮಾತ್ರ ಸಮಾಜದ ರಕ್ಷಣೆ ಸಾಧ್ಯ. ಆದುದರಿಂದ ಪೊಲೀಸರು ಮಾನಸಿಕ ಹಾಗೂ ದೈಹಿಕವಾಗಿ ಸಮತೋಲನ ಕಾಪಾಡಿಕೊಂಡು ನಾಗರಿರ ರಕ್ಷಣೆ ಮಾಡಬೇಕು ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್, ಕಳೆದ ವರ್ಷ ಆ.1ರಿಂದ ಈ ವರ್ಷದ ಸೆ.31ರವರೆಗೆ ಹುತಾತ್ಮರಾದ ಕರ್ನಾಟಕದ 17 ಮಂದಿ ಪೊಲೀಸ್ ಅಧಿಕಾರಿ ಸಿಬ್ಬಂದಿ ಸೇರಿದಂತೆ ದೇಶಾದ್ಯಂತ ಹುತಾತ್ಮರಾದ ಒಟ್ಟು 264 ಮಂದಿ ಪೊಲೀಸರ ಹೆಸರುಗಳನ್ನು ವಾಚಿಸಿದರು.

ಉಡುಪಿ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಉಪಸ್ಥಿತರಿದ್ದರು. ಆರಂಭದಲ್ಲಿ ಡಿಸಿ, ಎಸ್ಪಿ ಸೇರಿದಂತೆ ಗಣ್ಯರು ಹುತಾತ್ಮ ಪೊಲೀಸ್ ಪ್ರತಿಮೆಗೆ ಪುಷ್ಪಗುಚ್ಛ ಇರಿಸಿ ನಮನ ಸಲ್ಲಿಸಿದರು.

ಪರೇಡ್ ಕಮಾಂಡರ್ ಡಿಎಆರ್ ಪೊಲೀಸ್ ನಿರೀಕ್ಷಕ ಮೂರ್ತಿ ಎಸ್. ನಾಯ್ಕ ಗೌರವ ವಂದನೆ ಸಲ್ಲಿಸಿದರು. ಉಡುಪಿ ಪೊಲೀಸ್ ವೃತ್ತನಿರೀಕ್ಷಕ ಮಂಜುನಾಥ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News