ಉಡುಪಿ ಸಿಟಿ ಬಸ್ಸಿನಲ್ಲಿ ಕಳವು ಪ್ರಕರಣ: 12 ಗಂಟೆಯೊಳಗೆ ಮೂವರು ಮಹಿಳೆಯರ ಬಂಧನ

Update: 2020-10-21 14:46 GMT

ಉಡುಪಿ, ಅ. 21: ಬಸ್ಸಿನಲ್ಲಿ ಪ್ರಯಾಣಿಕರೊಬ್ಬರ ನಗದು ಸಹಿತ ಪರ್ಸ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕೇವಲ 12 ಗಂಟೆಯೊಳಗೆ ಆರೋಪಿಗಳಾದ ಮೂವರು ಮಹಿಳೆಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಳ್ಳಾರಿಯ ಸಬಿತಾ, ಲತಾ, ಕವಿತಾ ಬಂಧಿತ ಆರೋಪಿಗಳು. ಇವರಿಂದ 32,400 ರೂ. ನಗದು, ಎರಡು ಮೊಬೈಲ್, ಎರಡು ಎಟಿಎಂ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಉತ್ತರಹಳ್ಳಿ ಅರ್ಚನಾ ರಾವ್ (39) ಎಂಬವರು ಅ.20 ರಂದು ಸಂಜೆ 6ಗಂಟೆಗೆ ಸಿಟಿಬಸ್‌ನಲ್ಲಿ ಉಡುಪಿ ಸಿಟಿಬಸ್ ನಿಲ್ದಾಣದಿಂದ ಕುಂಜಿಬೆಟ್ಟುವಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮೂವರು ಮಹಿಳೆಯರು ಕಡಿಯಾಳಿಯಿಂದ ಬಸ್ ಹತ್ತಿದ್ದು, ಅವರ ಕೈಯಲ್ಲಿದ್ದ ಮಗುವನ್ನು ಅರ್ಚನಾ ರಾವ್ ತೊಡೆಯ ಮೇಲೆ ಕೂರಿಸಿದರು.

ಆ ಮೂರು ಜನ ಮಹಿಳೆಯರು, ಅರ್ಚನಾ ರಾವ್ ಬಳಿಯೇ ನಿಂತಿದ್ದು, ಅವರಿಗೆ ತಿಳಿಯದ ರೀತಿಯಲ್ಲಿ ಅವರ ಹೆಗಲ ಮೇಲೆ ಇದ್ದ ಬ್ಯಾಗಿನ ಜೀಪ್ ತೆರೆದು ಅದರ ಒಳಗಡೆ ಇದ್ದ ಪರ್ಸನ್ನು ಕಳವು ಮಾಡಿದ್ದರು. ಆ ಪರ್ಸ್‌ನಲ್ಲಿ ವಿವಿಧ ಬ್ಯಾಂಕ್ ಗಳ 4 ಎಟಿಎಂ ಕಾರ್ಡ್, ವೋಟರ್ ಐಡಿ, 5 ಸಾವಿರ ರೂ. ನಗದು ಹಾಗೂ ಇತರೇ ದಾಖಲೆ ಪತ್ರಗಳು ಇದ್ದವು. ಬಳಿಕ ಆ ಮಹಿಳೆಯರು ಬ್ಯಾಗಿನಲ್ಲಿದ್ದ ಚೀಟಿಯಲ್ಲಿ ಬರೆದಿಟ್ಟಿದ್ದ ಎಟಿಎಂ ಪಿನ್ ಬಳಸಿ 25,000ರೂ. ಹಣವನ್ನು ಡ್ರಾ ಮಾಡಿದ್ದರೆಂದು ಉಡುಪಿ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಈ ಬಗ್ಗೆ ಎಲ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಅದರಂತೆ ಉಡುಪಿ ನಗರ, ಸಂಚಾರ ಠಾಣೆ, ಮಣಿಪಾಲ, ಕಾಪು, ಪಡುಬಿದ್ರಿ ಪೊಲೀಸರು ಆರೋಪಿಗಳ ಚಲನವನ ಗಮನಿಸಲಾಯಿತು. ಬಸ್ ಹಾಗೂ ರಿಕ್ಷಾ ಚಾಲಕರ ಸಹಕಾರದೊಂದಿಗೆ ಮಾಹಿತಿ ಸಂಗ್ರಹಿಸಿ, ಧಾರವಾಡಕ್ಕೆ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿದ್ದ ಆರೋಪಿ ಗಳನ್ನು ಉಡುಪಿ ನಗರದಲ್ಲಿ ಇಂದು ಬೆಳಗ್ಗೆ ಬಂಧಿಸು ವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News