ಅ. 25ಕ್ಕೆ ಕೆಎಂಸಿಯಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

Update: 2020-10-21 15:26 GMT

ಮಣಿಪಾಲ, ಅ.21: ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ಮಾಸ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ತಿಂಗಳಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಯ ‘ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ’ವು ಇದೇ ಅ.25ರ ರವಿವಾರ ಸಂಜೆ 5:00ರಿಂದ 6.00ರವರೆಗೆ ಜೂಮ್ ಆ್ಯಪ್ ಮೂಲಕ ನೇರ ಪ್ರಸಾರದಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಮಾತುಕತೆ ಕಾರ್ಯಕ್ರಮವನ್ನು ಆಯೋಜಿಸಿದೆ.

ಕೆಎಂಸಿಯ ನುರಿತ ತಜ್ಞರು ಸ್ತನ ಕ್ಯಾನ್ಸರ್ ಕುರಿತು, ಅಂದರೆ ಸ್ತನ ಕ್ಯಾನ್ಸರನ್ನು ಮೊದಲೇ ಪತ್ತೆಹಚ್ಚುವ ಅಗತ್ಯತೆ, ಅದರ ಚಿಕಿತ್ಸೆಯ ಆಯ್ಕೆಗಳು ಮತ್ತು ಜೀವ ಉಳಿಸಲು ಸಹಾಯ ಮಾಡುವ ಮತ್ತು ತಡೆಗಟ್ಟುವ ವಿಧಾನಗಳ ಕುರಿತು ಮಾಹಿತಿ ನೀಡಲಿದ್ದಾರೆ.

ಇತ್ತೀಚಿನ ಅಧ್ಯಯನಗಳ ಪ್ರಕಾರ, ಸ್ತನ ಕ್ಯಾನ್ಸರನ್ನು ಮೊದಲೇ ಪತ್ತೆ ಹಚ್ಚುವುದರಿಂದ ರೋಗಿಯು ಬದುಕುಳಿಯುವ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಲಾಗಿದೆ.ಆರಂಭಿಕ ರೋಗ ನಿರ್ಣಯವು ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿ ಯಾಗಿ ಹೋರಾಡಲು ಸಹಾಯ ಮಾಡುತ್ತದೆ. ಈ ಅರಿವಿನ ತಿಂಗಳು ಸ್ತನ ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚುವ ಅಗತ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಸಹಾಯ ಮಾಡುತ್ತದೆ.

 ಸ್ತನದಲ್ಲಿ ಒಂದು ಉಂಡೆಯ ಉಪಸ್ಥಿತಿ, ಸ್ತನದಲ್ಲಿ ನೋವು, ಸ್ತನಗಳ ಸಮೀಪವಿರುವ ಪ್ರದೇಶಗಳಲ್ಲಿ ಊತ, ಎದೆ ಹಾಲು ಹೊರತುಪಡಿಸಿ ಬೇರೇನಾದರೂ ಮೊಲೆತೊಟ್ಟುಗಳಿಂದ ಹೊರಬರುವುದು, ಮೊಲೆತೊಟ್ಟುಗಳ ಆಕಾರದಲ್ಲಿ ಬದಲಾವಣೆ ಮತ್ತು ಅಂಡರ್ ಆರ್ಮ್ ಊತ ಮುಂತಾದವುಗಳು ಸ್ತನ ಕ್ಯಾನ್ಸರ್ ರೋಗದ ಚಿಹ್ನೆಗಳಾಗಿವೆ.

ಇಂಥ ಕೆಲವು ಸಂದರ್ಭಗಳಲ್ಲಿ ಇವು ಸ್ತನ ಕ್ಯಾನ್ಸರ್‌ನ ಸಂಕೇತವಾಗಿರದೆ ಇರಬಹುದು ಆದರೆ ಈ ಯಾವುದೇ ಚಿಹ್ನೆಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಈ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು -: https://bit.ly/33V0jEF-ಗೆ ಲಾಗಿನ್ ಆಗಬಹುದು ಎಂದು ಕೆಎಂಸಿ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News