ಆಭರಣ ಖರೀದಿಸಿ ನಕಲಿ ಚೆಕ್ ನೀಡಿದ ಪ್ರಕರಣ : ಮಹಿಳೆ ಬಂಧನ

Update: 2020-10-21 16:09 GMT

ಮಂಗಳೂರು, ಅ.21: ಲಕ್ಷಾಂತರ ರೂ. ಮೌಲ್ಯದ ಆಭರಣ ಖರೀದಿಸಿ ನಕಲಿ ಚೆಕ್ ನೀಡಿ ವಂಚಿಸಿದ ಆರೋಪದಲ್ಲಿ ಮಹಿಳೆಯನ್ನು ಬಜ್ಪೆ ಪೊಲೀಸರು ಬುಧವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಪ್ಪೆಪದವು ನಿವಾಸಿ ಫರೀದಾ ಬೇಗಂ (23) ಬಂಧಿತ ಮಹಿಳೆ ಎಂದು ತಿಳಿದುಬಂದಿದೆ.

ಕೈಕಂಬ ಮೂಡುಪೆರಾರದ ಆಭರಣ ಮಳಿಗೆಯಿಂದ ಆರೋಪಿಗಳು ಆ.24, 25, 26ರವರೆಗೆ ನಿರಂತರ 7.30 ಲಕ್ಷ ರೂ. ಮೌಲ್ಯದ ಚಿನ್ನ ಖರೀದಿಸಿ, ಚೆಕ್ ನೀಡಿದ್ದರು. ಬಳಿಕ ಚೆಕ್ ನಕಲಿ ಎನ್ನುವುದು ಗಮನಕ್ಕೆ ಬಂದ ನಂತರ ಮಳಿಗೆ ಮಾಲಕ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ತನಿಖೆ ಕೈಗೊಂಡ ಬಜ್ಪೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಪತಿ ತಲೆಮರೆಸಿಕೊಂಡಿದ್ದಾರೆ. ಇವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿ ಫರೀದಾ ಬೇಗಂ ವಿರುದ್ಧ ಇತ್ತೀಚೆಗೆ ಮೂಡುಬಿದಿರೆ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಆರೋಪಿ ದಂಪತಿಯು ಇಂತಹ ಅನೇಕರಿಗೆ ವಂಚಿಸಿರುವ ಮಾಹಿತಿ ಲಭಿಸಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News