ಮೊಂಟೆ ಪದವಿನಲ್ಲಿ ಇನ್ಫೋಸಿಸ್ ಫೌಂಡೇಶನ್ ನೆರವಿನಿಂದ ವಿಕಲಚೇತನರಿಗೆ ಪುನರ್ವಸತಿ ಕೇಂದ್ರ

Update: 2020-10-21 16:46 GMT

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 40, ವಿಕಲಚೇತನರಿದ್ದಾರೆ. ಇವರು ಹೆತ್ತವರ/ಪೋಷಕರ ಆರೈಕೆಯಲ್ಲಿ ಜೀವಿಸುತ್ತಿದ್ದಾರೆ. ಭವಿಷ್ಯದಲ್ಲಿ ಹೆತ್ತವರು/ಪೋಷಕರು ಆ ಮಕ್ಕಳನ್ನು ನೋಡಿಕೊಳ್ಳಲು ಅಶಕ್ತರಾಗಿದ್ದಲ್ಲಿ ಅಂತಹ ವಿಕಲಚೇತನರಿಗೆ ಶಾಶ್ವತವಾದ ಪುನರ್ವಸತಿ ಕೇಂದ್ರ ಬೇಕೆಂದು ಮನಗಂಡ ಸೇವಾಭಾರತಿ ಮಂಗಳೂರು ಸಂಸ್ಥೆಯು ಇನ್ಫೋಸಿಸ್ ಫೌಂಡೇಶನ್‌ನ ಸಿ.ಎಸ್.ಆರ್ ನಿಧಿಯಲ್ಲಿ ಸುಮಾರು ರೂ.14 ಕೋಟಿ ವೆಚ್ಚದ ಅತ್ಯಾಧುನಿಕ ಸೌಲಭ್ಯವುಳ್ಳ ಶಾಶ್ವತ ಪುನರ್ವಸತಿ ಕೇಂದ್ರ ನಿರ್ಮಾಣ ಮಾಡಲಿದೆ.

ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಮೊಂಟೆಪದವುನಲ್ಲಿ 'ಇನ್ಫೋಸಿಸ್ ಫೌಂಡೇಶನ್  ಸೇವಾಭಾರತಿ ದಿವ್ಯಾಂಗ ಸೇವಾ ಸಮುಚ್ಛಯ' ದಲ್ಲಿ ವಿಶೇಷ ಮಕ್ಕಳ ಸಾಮಾನ್ಯ ಶಾಲೆ, ವಸತಿ ಶಾಲೆ, ವಿಶೇಷ ಶಾಲೆಯ ಶಿಕ್ಷಕರ ತರಬೇತಿ ಕೇಂದ್ರ ಕೌಶಲ್ಯಾಭಿವೃದ್ಧಿ ಕೇಂದ್ರ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ಮತ್ತು ನಿರಂತರ ಫಿಸಿಯೋಥೆರಪಿ ಚಿಕಿತ್ಸೆ, ಯೋಗ, ವೈದ್ಯರುಗಳ ತಂಡದ ಸೇವೆ ಲಭ್ಯವಿರಲಿದೆ.

ಈಗಾಗಲೇ 2 ಎಕರೆ ಜಾಗದಲ್ಲಿ ಅಲೋಕ ಫೌಂಡೇಶನ್, ಸೇವಾಭಾರತಿಯ ಸದಸ್ಯರುಗಳು ಹಾಗೂ ಸ್ಥಳೀಯರ ಸಹಕಾರದಲ್ಲಿ ಪಶ್ಚಿಮ ಘಟ್ಟ ದಲ್ಲಿ ಲಭ್ಯವಿರುವ ವಿಶೇಷ 650 ಗಿಡಗಳನ್ನು ನೆಟ್ಟು 'ಮಾಧವ ವನ' ಎಂದು ಹೆಸರಿಸಲಾಗಿದೆ. ಇಲ್ಲಿ ಪರಿಸರ ಸಂರಕ್ಷಣೆ ಕುರಿತು ತಾಜ್ಯ ಪರಿಷ್ಕರಣೆ ಮತ್ತು ಗೊಬ್ಬರ ತಯಾರಿಸುವ ಘಟಕ ಕೂಡ ನಿರ್ಮಾಣವಾಗಲಿದೆ. ಈ ಕನಸಿನ ಸೇವಾ ಪ್ರಕಲ್ಪಕ್ಕೆ ಅ‌.23 2020 ರಂದು ಬೆಳಗ್ಗೆ 10.30ರಿಂದ ಶಂಕುಸ್ಥಾಪನೆಯ ಕಾರ್ಯಕ್ರಮ ನಡೆಯಲಿದೆ ಎಂದು  ಸೇವಾಭಾರತಿ ಮಂಗಳೂರು ಇದರ ವಿಶ್ವಸ್ಥ ಮಂಡಳಿಯ ಪರವಾಗಿ ಕಾರ್ಯದರ್ಶಿ ಶ್ರೀ ಹೆಚ್ ನಾಗರಾಜ್ ಭಟ್ ಹಾಗೂ ಕೋಶಾಧಿಕಾರಿ ಶ್ರೀ ಪಿ ವಿನೋದ್ ಶೆಣೈ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News