ಕಾಸರಗೋಡು: ಗಡಿ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಪುನರಾರಂಭ

Update: 2020-10-21 16:55 GMT

ಕಾಸರಗೋಡು:  ಕಾಸರಗೊಡು ಜಿಲ್ಲೆಯ ಗಡಿ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಪುನರಾರಂಭಿಸಲು ಜಿಲ್ಲಾ ಮಟ್ಟದ ಕೊರೋನ ಕೋರ್ ಸಮಿತಿ ಸಭೆ ತೀರ್ಮಾನಿಸಿದೆ.

ವೀಡಿಯೋ ಕಾನ್ ಫೆರೆನ್ಸ್ ಮೂಲಕ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಹೈಕೋರ್ಟ್ ತೀರ್ಪಿನ ಪ್ರಕಾರ ಕೋವಿಡ್ ನಿರ್ಮೂಲನ ಉದ್ದೇಶದ ತಪಾಸಣೆ ಈ ವೇಳೆ ನಡೆಯಲಿದೆ. ಆದರೆ ಗಡಿ ಪ್ರದೇಶದಲ್ಲಿ ಯಾರಿಗೂ ತಡೆ ಮಾಡುವುದಿಲ್ಲ. ಬಾರಿಕ್ಯಾಡ್ ಸ್ಥಾಪಿಸಿ ಸಂಚಾರವನ್ನೂ ಮೊಟಕುಗೊಳಿಸುವುದಿಲ್ಲ. ಈ ಸಂಬಮದ ಪ್ರತ್ಯೇಕ ಪಾಸ್ ವ್ಯವಸ್ಥೆಯನ್ನೂ ಏರ್ಪಡಿಸು ವುದಿಲ್ಲ. ಇತರ ರಾಜ್ಯಗಳಿಂದ ಕಾಸರಗೋಡು ಜಿಲ್ಲೆಗೆ ಆಗಮಿಸುವವರು ಕೋವಿಡ್ 19 ಜಾಗ್ರತಾ ವೆಬ್ ಪೋರ್ಟಲ್ ನಲ್ಲಿ ಕಡ್ಡಾಯವಾಗಿ ನೋಂದಣಿ ನಡೆಸಬೇಕು. ಈ ಸಂಬಂಧ ಖಚಿತತೆಗಾಗಿ ತಪಾಸಣೆ ನಡೆಯಲಿದೆ. ಇಲ್ಲಿ ಕೋವಿಡ್ ತಪಾಸಣೆ ಸೌಲಭ್ಯವೂ ಇರುವುದು.

ತಲಪ್ಪಾಡಿ ಚೆಕ್ ಪೋಸ್ಟ್ ನಲ್ಲಿ ಪೊಲೀಸ್, ಕಂದಾಯ, ಆರೋಗ್ಯ ಇಲಾಖೆಗಳ ಸಿಬ್ಬಂದಿ ನಡೆಸುತ್ತಿರುವ ತಪಾಸಣೆ ಗಡಿ ಪ್ರದೇಶಗಳ 16 ರಸ್ತೆಗಳಲ್ಲೂ ಪುನರಾರಂಭಗೊಳ್ಳಲಿದೆ. ಪೊಲೀಸರಲ್ಲದೆ, ಅರಣ್ಯ, ಅಗ್ನಿಶಾಕದಳ, ಅಬಕಾರಿ ಇಲಾಖೆಗಳ ಸಮವಸ್ತ್ರಧಾರಿ ಸಿಬ್ಬಂದಿ ಕರ್ತವ್ಯ ದಲ್ಲಿರುವರು. ಇಡುಕ್ಕಿ, ವಯನಾಡ್, ತಿರುವನಂತಪುರಂ ಜಿಲ್ಲೆಗಳ ಗಡಿಪ್ರದೇಶಗಳನ್ನು ಈ ವರೆಗೆ ಮುಕ್ತಗೊಳಿಸಿಲ್ಲ. ಆದರೆ ಕಾಸರಗೋಡು ಜಿಲ್ಲೆಯಲ್ಲಿ ಹೈಕೋರ್ಟ್ ತೀರ್ಪು ಪ್ರಕಾರ ಕೋವಿಡ್ ರೋಗ ಹೆಚ್ಚಳ ನಿಯಂತ್ರಣ ನಿಟ್ಟಿನಲ್ಲಿ ಆಗಮಿಸುವವರ ತಪಾಸಣೆ ನಡೆಸಲಾಗುವುದು. ವಾರದ ಎಲ್ಲ ದಿನಗಳಲ್ಲೂ 24 ತಾಸುಗಳೂ ತಪಾಸಣೆ ನಡೆಯಲಿದೆ.

ಕೋವಿಡ್ ತಪಾಸಣೆ ಹೆಚ್ಚಳ

ಕಾಸರಗೊಡು ಜಿಲ್ಲೆಯಲ್ಲಿ ಕೋವಿಡ್ ತಪಾಸಣೆ ಹೆಚ್ಚಳಗೊಳಿಸಲಾಗುವುದು. ಈಗ ಜಿಲ್ಲೆಯಲ್ಲಿ ಕೋವಿಡ್ ರೋಗಲಕ್ಷಣ ವಿರುವ ಎಲ್ಲ ಮಂದಿಯನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಪ್ರತಿದಿನ 1700 ರಿಂದ 2 ಸಾವಿರ ಮಂದಿಯ ತಪಾಸಣೆ ನಡೆಸಲಾಗುತ್ತಿದೆ. ಮುಂದೆ 3 ಸಾವಿರ ಮಂದಿಯನ್ನು ತಪಾಸಣೆಗೊಳಪಡಿಸಲು ರಾಜ್ಯ ಸರಕಾರ ಆದೇಶ ನೀಡಿದೆ. ಈ ನಿಟ್ಟಿನಲ್ಲಿ ದಂತವೈದ್ಯರನ್ನು, ದಾದಿಯರನ್ನು ಗಡಿ ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯದಲ್ಲಿ ನೇಮಿಸಿ ತಪಾಸಣೆ ನಡೆಸಲು ಕೊರೋನಾ ಕೋರ್ ಸಮಿತಿ ಸಭೆ ತೀರ್ಮಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News