ರಾಜ್ಯ ಕರಾವಳಿಯಲ್ಲಿ ಹೊರರಾಜ್ಯ ಮೀನುಗಾರರ ಅಕ್ರಮ ಮೀನುಗಾರಿಕೆ

Update: 2020-10-22 15:51 GMT

ಮಲ್ಪೆ, ಅ. 22: ಮಲ್ಪೆ ಬಂದರಿನಿಂದ 10 ನಾಟಿಕಲ್ ಮೈಲು ದೂರದಲ್ಲಿ ಅಕ್ರಮ ಲೈಟ್ ಫಿಶಿಂಗ್ ಹಾಗೂ ಚೌರಿ ಹಾಕಿ ಮೀನು ಹಿಡಿಯುತಿದ್ದ ಕೇರಳ ಮೂಲದ ಬೋಟುಗಳಲ್ಲಿ ಒಂದನ್ನು ವಶಕ್ಕೆ ಪಡೆದ ಮಲ್ಪೆ ಮೀನುಗಾರರು ಅದನ್ನು ಬೋಟಿನಲ್ಲಿದ್ದ 10 ಮಂದಿ ತಮಿಳು ಮೀನುಗಾರರೊಂದಿಗೆ ಮಲ್ಪೆ ಬಂದರಿಗೆ ಕರೆ ತಂದಿದ್ದಾರೆ.

ಯಾವುದೇ ಸಕ್ರಮ ದಾಖಲೆಗಳನ್ನು (ಆರ್‌ಸಿ, ರಿಜಿಸ್ಟರ್ ನಂ.) ಹೊಂದಿಲ್ಲದ ಹೊಸದಾದ ಬೃಹತ್ ಗಾತ್ರದ ಈ ಬೋಟನ್ನು ಇಂದು ಅಪರಾಹ್ನದ ವೇಳೆಗೆ ಮಲ್ಪೆ ಬಂದರಿಗೆ ತರಲಾಗಿದ್ದು, ಅದೀಗ ಬಂದರಿನಲ್ಲಿದೆ. ಅದರಲ್ಲಿದ್ದ ಸಿಬ್ಬಂದಿಗಳನ್ನು ಮಲ್ಪೆ ಪೊಲೀಸರು ಇದೀಗ ವಿಚಾರಣೆ ಗೊಳಪಡಿಸಿದ್ದಾರೆ.

ಶಾನ್ ಎಂಬವರ ಮಾಲಕತ್ವದ ‘ಮಕರ ಸಂಕ್ರಾಂತಿ’ ಪರ್ಸೀನ್ ಬೋಟು ಬುಧವಾರ ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆಂದು ತೆರಳಿದ್ದು, ಇಂದು ಬೆಳಗಿನ ಜಾವ ಮಲ್ಪೆಯಿಂದ ಸುಮಾರು 10 ನಾಟಿಕಲ್ ಮೈಲು ದೂರದಲ್ಲಿ ಕೇರಳಕ್ಕೆ ಸೇರಿದ್ದೆನ್ನಲಾದ ಬೃಹತ್ ಗಾತ್ರದ ‘ಇಂಡಿಯನ್’ ಹೆಸರಿನ ಬೋಟು ಲೈಟ್ ಫಿಶಿಂಗ್ ನಡೆಸುತ್ತಿರುವುದು ಕಂಡುಬಂದಿತ್ತು. ರಾಜ್ಯದಲ್ಲಿ ಲೈಟ್ ಫಿಶಿಂಗ್ ಹಾಗೂ ಚೌರಿ ಹಾಕಿ ಮೀನು ಹಿಡಿಯುವುದು ನಿಷೇಧವಾದ್ದರಿಂದ ತಕ್ಷಣ ಮಕರ ಸಂಕ್ರಾಂತಿಯಲ್ಲಿದ್ದ ಮೀನುಗಾರರು ಇದನ್ನು ಪ್ರಶ್ನಿಸಿದರೆನ್ನಲಾಗಿದೆ.

ಮೀನುಗಾರರಿಂದ ಗೂಂಡಾಗಿರಿ: ಆಗ ಇಂಡಿಯನ್ ಬೋಟಿನಲ್ಲಿದ್ದ ತಮಿಳುನಾಡಿನ ಮೀನುಗಾರರು ಇವರ ಮೇಲೆ ದಾಳಿ ನಡೆಸಿದ್ದು, ತಮ್ಮ ಬೃಹತ್ ಬೋಟನ್ನು ಮಕರ ಸಂಕ್ರಾಂತಿಗೆ ಡಿಕ್ಕಿ ಹೊಡೆಸಿ ಸಾಕಷ್ಟು ಹಾನಿಯುಂಟು ಮಾಡಿದರೆನ್ನಲಾಗಿದೆ. ಇದರಿಂದ ಮಲ್ಪೆಯ ಬೋಟಿಗೆ 10 ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ. ಅಲ್ಲದೇ ಈ ವೇಳೆ ಮಕರ ಸಂಕ್ರಾಂತಿಯಲ್ಲಿದ್ದ ಇಬ್ಬರು ಮೀನು ಗಾರರು ಸಮುದ್ರಕ್ಕೆ ಬಿದ್ದು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಈ ವೇಳೆ ಆಸುಪಾಸಿನಲ್ಲಿ ಮೀನುಗಾರಿಕೆ ನಡೆಸುತಿದ್ದ ಗಂಗೊಳ್ಳಿ, ಮಂಗಳೂರು ಬಂದರಿನಿಂದ ತೆರಳಿದ ಮೀನುಗಾರರು ಹಾಗೂ ಬೋಟುಗಳು ಮಕರ ಸಂಕ್ರಾಂತಿಯ ಸಹಾಯಕ್ಕೆ ಬಂದಿದ್ದು, ಇದರಿಂದ ತಮಿಳುನಾಡು ಬೋಟಿನಲ್ಲಿದ್ದವರನ್ನು ವಶಕ್ಕೆ ಪಡೆದು ಬೋಟಿನೊಂದಿಗೆ ಮಲ್ಪೆ ಬಂದರಿಗೆ ಕರೆ ತರಲಾಗಿದೆ.

ಈ ವೇಳೆ ರಾಜ್ಯ ಕರಾವಳಿಯಲ್ಲಿ ಹೊರರಾಜ್ಯಗಳ 100ಕ್ಕೂ ಅಧಿಕ ಬೋಟುಗಳು ಅಕ್ರಮ ಲೈಟ್ ಫಿಶಿಂಗ್ ಮೀನುಗಾರಿಕೆ ನಡೆಸುತ್ತಿರುವುದು ಕಂಡುಬಂದಿದೆ. ಘಟನೆ ಹಿನ್ನೆಲೆಯಲ್ಲಿ ಅವರು ಅಲ್ಲಿಂದ ಪರಾರಿಯಾದರು ಎಂದು ಮಲ್ಪೆಯ ಪರ್ಷಿನ್ ಮೀನುಗಾರರ ಸಂಘದ ನವೀನ್ ಬಂಗೇರ ಪತ್ರಿಕೆಗೆ ತಿಳಿಸಿದ್ದಾರೆ.

ಈ ಬಗ್ಗೆ ಮಲ್ಪೆ ಪರ್ಸಿನ್ ಮೀನುಗಾರರ ಸಂಘ ಹಾಗೂ ಮಕರ ಸಂಕ್ರಾಂತಿಯ ಮಾಲಕರಾದ ಶಾನ್ ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಮಲ್ಪೆ ಪೊಲೀಸರ ಸುಪರ್ದಿಯಲ್ಲಿರುವ ಅಕ್ರಮ ಮೀನುಗಾರಿಕೆ ನಡೆಸುತಿದ್ದ ಬೋಟಿನಲ್ಲಿದ್ದ 10 ಮಂದಿ ಮೀನುಗಾರರ ವಿಚಾರಣೆ ನಡೆಯುತ್ತಿದೆ.

ಸ್ಥಳೀಯ ಮೀನುಗಾರರ ಆಕ್ರೋಶ: ಸ್ಥಳೀಯ ಮೀನುಗಾರರಿಗೆ ಲೈಟ್ ಫಿಶಿಂಗ್ ಹಾಗೂ ಚೌರಿ ಹಾಕಿ ಮೀನು ಹಿಡಿಯುವುದಕ್ಕೆ ಕಾನೂನಿನ ನಿಷೇಧ ವನ್ನು ನೆನಪಿಸುವ ಇಲ್ಲಿ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಕರಾವಳಿ ಕಾವಲು ಪಡೆ ಪೊಲೀಸರು, ರಾಜ್ಯ ಕರಾವಳಿ ಯಲ್ಲಿ ಹೊರ ರಾಜ್ಯಗಳ ಮೀನುಗಾರರು ನಡೆಸುವ ಅಕ್ರಮ ಮೀನುಗಾರಿಕೆಯನ್ನು ಕಂಡೂ ಕಾಣದಂತೆ ವರ್ತಿಸುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೆರೆ ಹಿಡಿದ ಮೀನುಗಾರರನ್ನು ಬಂಧಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸ ಬೇಕು ಎಂದು ಸ್ಥಳೀಯ ಮೀನುಗಾರರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News