ಲೇಹ್ ಚೀನಾದ ಭೂಭಾಗ ಎಂದು ತೋರಿಸಿದ್ದ ಟ್ವಿಟರ್‌ಗೆ ಕೇಂದ್ರದ ಎಚ್ಚರಿಕೆ

Update: 2020-10-22 17:18 GMT

ಹೊಸದಿಲ್ಲಿ, ಅ.22: ಲಡಾಖ್ ಮತ್ತು ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಮತ್ತು ಪರಾಧೀನ ಮಾಡಲಾಗದ ಭಾಗವಾಗಿದ್ದು ಭಾರತದ ಸಂವಿಧಾನದ ಆಡಳಿತಕ್ಕೆ ಒಳಪಟ್ಟಿದೆ ಎಂದು ಸಾಮಾಜಿಕ ಮಾಧ್ಯಮ ಟ್ವಿಟರ್‌ಗೆ ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಟ್ವಿಟರ್‌ನ ವೇದಿಕೆಯಲ್ಲಿ ಸ್ಥಳ ನಿರ್ದೇಶನ ವಿಭಾಗದಲ್ಲಿ ಲೇಹ್ ಪ್ರದೇಶವನ್ನು ಚೀನಾದ ಭೂಭಾಗ ಎಂದು ತೋರಿಸಿದ್ದಕ್ಕೆ ಟ್ವಿಟರ್‌ಗೆ ಕೇಂದ್ರ ಸರಕಾರ ಎಚ್ಚರಿಕೆ ನೀಡಿ ಈ ಸ್ಪಷ್ಟನೆ ನೀಡಿದೆ. ಭಾರತದ ಭೂಪಟವನ್ನು ತಪ್ಪಾಗಿ ಬಿಂಬಿಸಿರುವುದಕ್ಕೆ ಅಸಮಾಧಾನ ಸೂಚಿಸಿ ಮತ್ತು ಭಾರತದ ಪ್ರಜೆಗಳ ಭಾವನೆಯನ್ನು ಗೌರವಿಸುವಂತೆ ಟ್ವಿಟರ್‌ನ ಸಿಇಒ ಜಾಕ್ ಡೋರ್ಸೆಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಲಾಗಿದೆ. ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಅಗೌರವ ತೋರುವ(ನಕ್ಷೆಯಲ್ಲಿ ಬಿಂಬಿತವಾಗಿರುವಂತೆ) ಉಪಕ್ರಮ ಅಕ್ರಮವಾಗಿದ್ದು ಖಂಡಿತಾ ಸ್ವೀಕಾರಾರ್ಹವಲ್ಲ. ಇಂತಹ ಪ್ರಯತ್ನಗಳು ಟ್ವಿಟರ್‌ಗೆ ಕೆಟ್ಟ ಹೆಸರು ತರುವುದಷ್ಟೇ ಅಲ್ಲ, ಮಧ್ಯವರ್ತಿಯಾಗಿ ಅದರ ತಟಸ್ಥತೆ ಮತ್ತು ನ್ಯಾಯಪರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಅಜಯ್ ಸಾಹ್ನಿ ಪತ್ರದಲ್ಲಿ ತಿಳಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ರಾಜಧಾನಿ ಲೇಹ್ ಅನ್ನು ಚೀನಾದ ಭಾಗವೆಂದು ಟ್ವಿಟರ್‌ನ ಸ್ಥಳ ನಿರ್ದೇಶನ ವಿಭಾಗದಲ್ಲಿ ತೋರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News