ಮಹಿಳಾ ದೌರ್ಜನ್ಯ ಕೇಸು; ಉತ್ತರ ಪ್ರದೇಶಕ್ಕೆ ಮೊದಲ ಸ್ಥಾನ : ಶ್ಯಾಮಲಾ ಕುಂದರ್

Update: 2020-10-23 13:29 GMT

ಉಡುಪಿ, ಅ. 23: ಇಡೀ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ, ಉತ್ತರ ಪ್ರದೇಶದಲ್ಲಿ ಅತಿಹೆಚ್ಚು ಮಹಿಳಾ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಈ ವರ್ಷದ ಕೇವಲ ಒಂಭತ್ತು ತಿಂಗಳಲ್ಲಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ 8140 ದೂರುಗಳು ಬಂದಿವೆ. ಇದು ದೇಶದ ಒಟ್ಟು ಪ್ರಕರಣಗಳ ಪೈಕಿ ಶೇ.50ರಷ್ಟು ಆಗಿವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಹೆಣ್ಣು ಮಕ್ಕಳು ಇಂದಿಗೂ ಮನೆಯಿಂದ ಹೊರಗಡೆ ಬರಲು ಹೆದರುತ್ತಿದ್ದಾರೆ. ನಮ್ಮಂತೆ ಅಲ್ಲಿನ ಹೆಣ್ಣು ಮಕ್ಕಳು ಇನ್ನು ಕೂಡ ಸ್ವಾವಲಂಬಿಯಾಗಿಲ್ಲ. ಬರೇಲಿ ಜಿಲ್ಲೆ ಒಂದರಲ್ಲಿಯೇ ಈ ವರ್ಷ ಬಂದಿರುವ 250 ದೂರುಗಳಲ್ಲಿ ವರದಕ್ಷಿಣೆ ಸಾವು ಪ್ರಕರಣಗಳೇ ಹೆಚ್ಚು ಎಂದರು.

ದೆಹಲಿಯಲ್ಲಿ ಈ ವರ್ಷ 2035 ಪ್ರಕರಣಗಳು ದಾಖಲಾಗುವ ಮೂಲಕ ಎರಡನೇ ಸ್ಥಾನದಲ್ಲಿದೆ. ಈಶಾನ್ಯ ಭಾರತದ ರಾಜ್ಯಗಳಲ್ಲಿ ಅತಿಕಡಿಮೆ ಪ್ರಕರಣ ಗಳು ವರದಿಯಾಗುತ್ತಿವೆ. ತ್ರಿಪುರದಲ್ಲಿ ಕೇವಲ ಮೂರು ಮತ್ತು ಕೆಲವು ರಾಜ್ಯ ಗಳಲ್ಲಿ ಪ್ರಕರಣವೇ ದಾಖಲಾಗಿಲ್ಲ ಎಂದು ಅವರು ಹೇಳಿದರು.

ಹತ್ರಸ್ ಪ್ರಕರಣವನ್ನು ಆಯೋಗ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡು ವಿಚಾರಣೆ ನಡೆಸುತ್ತಿದೆ. ಮೃತರ ಕುಟುಂಬದ ಜೊತೆ ಆಯೋಗ ಮಾತುಕತೆ ನಡೆಸಿದೆ. ಆ ಪ್ರಕರಣದಲ್ಲಿ ಇಡೀ ಆಯೋಗವು ಅನ್ಯಾಯಕ್ಕೆ ಒಳಗಾದ ಸಂತ್ರಸ್ತೆ ಕುಟುಂಬದ ಜೊತೆ ನಿಲ್ಲುತ್ತದೆ ಎಂದು ಅವರು ತಿಳಿಸಿದರು.

ಕೋವಿಡ್ ಪರಿಹಾರಕ್ಕೆ ಸೂಚನೆ

ಕೋವಿಡ್ ಕರ್ತವ್ಯದ ವೇಳೆ ಮೃತಪಟ್ಟ ಬ್ರಹ್ಮಾವರದ ಅಂಗನವಾಡಿ ಕಾರ್ಯ ಕರ್ತೆಯ ಕುಟುಂಬಕ್ಕೆ ಇನ್ನು ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಜಿಪಂ ಅಧಿಕಾರಿಗಳಿಗೆ ಸೂಚನೆ ನೀಡಿ, ಆ ಕುಟುಂಬದವರಿಗೆ ತ್ವರಿತವಾಗಿ ಪರಿಹಾರ ನೀಡುವಂತೆ ತಿಳಿಸಿದ್ದೇನೆ ಎಂದು ಶ್ಯಾಮಲಾ ಕುಂದರ್ ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ಅತಿಹೆಚ್ಚು ಮಹಿಳಾ ಕಾರ್ಮಿಕರು ದುಡಿಯುವ ಗಾರ್ಮೆಂಟ್, ಗೇರುಬೀಜ ಫ್ಯಾಕ್ಟರಿ, ಕಚೇರಿಗಳಲ್ಲಿ ಆಂತರಿಕ ದೂರು ಕಮಿಟಿ ಯನ್ನು ರಚಿಸಿ, 2-3 ತಿಂಗಳಿಗೊಮ್ಮೆ ಸಭೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಉಡುಪಿಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಅವರು ತಿಳಿಸಿದರು.

ಉಡುಪಿ ನಗರದಲ್ಲಿ ಇತ್ತೀಚೆಗೆ ನಡೆದ ನವಜಾತ ಶಿಶುವನ್ನು ಕಸದ ತೊಟ್ಟಿಗೆ ಎಸೆದ ಪ್ರಕರಣ ಮುಂದೆ ನಡೆಯದಂತೆ ಕಾರ್ಯಪ್ರವೃತರಾಗಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷದಿಂದ ಮೃತಪಟ್ಟ ರಕ್ಷಾ ಪ್ರಕರಣ ವನ್ನು ಶೀಘ್ರ ತನಿಖೆ ನಡೆಸುವಂತೆ ಡಿಜಿಪಿಗೆ, ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು.

ಇಂದು ವಿದ್ಯಾರ್ಥಿನಿಯರು ಕೂಡ ಮಾದಕ ದ್ರವ್ಯಕ್ಕೆ ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾಲೇಜಿನ ಸುತ್ತಮುತ್ತಲಿ ಪ್ರದೇಶದಲ್ಲಿ ಪೊಲೀಸರು ಪ್ರತಿದಿನ ಗಸ್ತು ತಿರುಗುವಂತೆ ಸೂಚನೆ ನೀಡಲಾಗಿದೆ. ಈ ವಿಚಾರದಲ್ಲಿ ಮಣಿಪಾಲಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ಕಿರಣ್, ಎಸ್ಸೈ ಫೆಮಿನಾ, ಶಿಶು ಕಲ್ಯಾಣಾಧಿಕಾರಿ ವೀಣಾ ಉಪಸ್ಥಿತರಿದ್ದರು.

ದೇಶದಲ್ಲಿ ಒಟ್ಟು 17,099 ದೂರುಗಳು

ದೇಶದಲ್ಲಿ ಈ ವರ್ಷ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಒಟ್ಟು 17,099 ದೂರುಗಳು ಬಂದಿದ್ದು, ಅದರಲ್ಲಿ 16,533ರ ತನಿಖೆ ಪ್ರಗತಿಯಲ್ಲಿದ್ದರೆ, 566 ಬಾಕಿ ಇವೆ. 3296 ಪ್ರಕರಣಗಳನ್ನು ಪೂರ್ಣಗೊಳಿಸಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗ ಹೊರತುಪಡಿಸಿ ರಾಜ್ಯ ಮಹಿಳಾ ಆಯೋಗ, ಪೊಲೀಸ್ ಇಲಾಖೆ, ಸಖಿ ಓನ್ ಸ್ಟಾಪ್ ಸೆಂಟರ್‌ಗಳಿಗೆ ಬೇರೆಯೇ ದೂರುಗಳು ಬರುತ್ತವೆ ಎಂದು ಅವರು ಮಾಹಿತಿ ನೀಡಿದರು.

ಈ ವರ್ಷ ಅಕ್ಟೋಬರ್ ತಿಂಗಳವರೆಗೆ ಕರ್ನಾಟಕದಿಂದ 350 ದೂರುಗಳು ಆಯೋಗದಲ್ಲಿ ದಾಖಲಾಗಿದ್ದು, ಅದರಲ್ಲಿ 332 ಪ್ರಗತಿ, 13 ಬಾಕಿ ಮತ್ತು 59 ಇತ್ಯರ್ಥಗೊಂಡಿವೆ. ರಾಜ್ಯದಲ್ಲಿ ಕೌಟುಂಬಿಕ ದೌರ್ಜನ್ಯ ಮತ್ತು ಲಿವಿಂಗ್ ಟುಗೆದರ್‌ಗೆ ಸಂಬಂಧಿಸಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚು ದಾಖ ಲಾಗುತ್ತಿವೆ. ರಾಜ್ಯದ ಅತೀಹೆಚ್ಚಿನ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗುತ್ತಿವೆ. ಉಡುಪಿಯಲ್ಲಿ 13 ಮತ್ತು ಮಂಗಳೂರಿನಲ್ಲಿ 4 ಕೇಸು ದಾಖಲಾಗಿವೆ ಎಂದು ಶ್ಯಾಮಲಾ ಕುಂದರ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News