ದೇಶದ ಮೊದಲ ಕೋವಿಡ್ ಲಸಿಕೆ ಕನಿಷ್ಠ ಶೇ.60ರಷ್ಟು ಪರಿಣಾಮಕಾರಿಯಾಗಲಿದೆ: ಭಾರತ್ ಬಯೊಟೆಕ್

Update: 2020-10-23 15:04 GMT

ಹೊಸದಿಲ್ಲಿ,ಅ.23: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಭಾಗಿತ್ವದೊಂದಿಗೆ ಹೈದರಾಬಾದ್‌ನ ಭಾರತ ಬಯೊಟೆಕ್ ಅಭಿವೃದ್ಧಿಗೊಳಿಸುತ್ತಿರುವ ದೇಶದ ಮೊದಲ ಕೊರೋನ ವೈರಸ್ ಕೊವ್ಯಾಕ್ಸಿನ್ ಕನಿಷ್ಠ ಶೇ.60ರಷ್ಟು ಪರಿಣಾಮಕಾರಿಯಾಗುವ ಸಾಧ್ಯತೆಗಳಿವೆ.

ಭಾರತೀಯ ಔಷಧಿಗಳ ಮಹಾ ನಿಯಂತ್ರಕರ ಕಚೇರಿ (ಡಿಸಿಜಿಐ)ಯು ಲಸಿಕೆಯ ಪರಿಣಾಮಕಾರಿತ್ವವನ್ನು ಸಾಬೀತುಗೊಳಿಸಲು ಅದರ ಮೂರನೆಯ ಹಂತದ ಕ್ಲಿನಿಕಲ್ ಟ್ರಯಲ್‌ಗಾಗಿ ಗುರುವಾರ ಭಾರತ್ ಬಯೊಟೆಕ್‌ಗೆ ಅನುಮತಿಯನ್ನು ನೀಡಿದೆ.ಮೂರನೇ ಹಂತದ ಟ್ರಯಲ್‌ನ ಮಧ್ಯಂತರ ಫಲಿತಾಂಶಗಳು ಮುಂದಿನ ವರ್ಷದ ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ.

‘ನಮ್ಮ ಕೋವಿಡ್-19 ನಿಗ್ರಹ ಲಸಿಕೆಯ ಪರಿಣಾಮಕಾರಿತ್ವ ಕನಿಷ್ಠ ಶೇ.60ರಷ್ಟಿರುತ್ತದೆ ಎನ್ನುವುದು ನಮ್ಮ ಗುರಿಯಾಗಿದೆ. ಕೊವ್ಯಾಕ್ಸಿನ್‌ಗಾಗಿ ಅತ್ಯಂತ ದೊಡ್ಡದಾದ ಮೂರನೇ ಹಂತದ ಟ್ರಯಲ್‌ನ್ನು ನಾವು ನಡೆಸುತ್ತಿದ್ದೇವೆ ’ ಎಂದು ಭಾರತ್ ಬಯೊಟೆಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಾಯಿಪ್ರಸಾದ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ಪ್ರಸಾದ ಕಂಪನಿಯ ಉತ್ಪನ್ನ ಅಭಿವೃದ್ಧಿ ತಂಡದ ಸದಸ್ಯರೂ ಆಗಿದ್ದಾರೆ.

ಶ್ವಾಸಕೋಶ ಲಸಿಕೆಗಳಿಗೆ ಸಂಬಂಧಿಸಿದ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯು ಕನಿಷ್ಠ ಶೇ.50ರಷ್ಟು ಪರಿಣಾಮಕಾರಿತ್ವ ಹೊಂದಿರುವ ಲಸಿಕೆಗಳಿಗೆ ಮಂಜೂರಾತಿಯನ್ನು ನೀಡುತ್ತದೆ. ಅಮೆರಿಕದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟರೇಷನ್ ಮತ್ತು ಭಾರತದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನ್ಯೆಸೇಷನ್ ಕೂಡ ಇದೇ ಮಾನದಂಡವನ್ನು ಅನುಸರಿಸುತ್ತಿವೆ. ಕೊವ್ಯಾಕ್ಸಿನ್‌ಗೆ ನಮ್ಮ ಪರಿಣಾಮಕಾರಿತ್ವ ಗುರಿ ಶೇ.60 ಆಗಿದೆ. ನಮ್ಮ ಈವರೆಗಿನ ಪ್ರಯೋಗಗಳು ಸೂಚಿಸಿರುವಂತೆ ಲಸಿಕೆಯ ಪರಿಣಾಮಕಾರಿತ್ವ ಶೇ.50ಕ್ಕಿಂತ ಕಡಿಮೆಯಿರುವ ಸಾಧ್ಯತೆಯಿಲ್ಲ ಎಂದು ಪ್ರಸಾದ್ ಹೇಳಿದರು.

ಸದ್ಯದ ಯೋಜನೆಯಂತೆ ಕಂಪನಿಯು ನವಂಬರ್‌ನ ಮೊದಲ ಎರಡು ವಾರಗಳಲ್ಲಿ ಲಸಿಕೆಯ ಪರಿಣಾಮಕಾರಿತ್ವವನ್ನು ನಿರ್ಧರಿಸಲು ಮೂರನೇ ಹಂತದ ಟ್ರಯಲ್ ಆರಂಭಿಸಲಿದೆ. ಇದಕ್ಕಾಗಿ 13-14 ರಾಜ್ಯಗಳಲ್ಲಿಯ 25-30 ಸ್ಥಳಗಳಲ್ಲಿ 26,000 ಜನರ ಮೇಲೆ ಪ್ರಯೋಗಗಳನ್ನು ನಡೆಸಲಾಗುವುದು. ಮೊದಲ ಹಂತದ ಟ್ರಯಲ್‌ನಲ್ಲಿ 375 ಮತ್ತು ಎರಡನೇ ಹಂತದ ಟ್ರಯಲ್‌ನಲ್ಲಿ 2,400 ಜನರು ಪಾಲ್ಗೊಂಡಿದ್ದರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News