ನೋಟು ನಿಷೇಧ ಸಂದರ್ಭದ ಭ್ರಷ್ಟಾಚಾರದ ಬಗ್ಗೆ ಟ್ವೀಟಿಸಿದ್ದ ಸೂರತ್‌ನ ಬಿಜೆಪಿ ನಾಯಕನ ನಿವಾಸಗಳಿಗೆ ಐಟಿ ದಾಳಿ

Update: 2020-10-23 16:14 GMT
Photo: twitter.com/pvssarma/photo

ಹೊಸದಿಲ್ಲಿ,ಅ.23: ಸೂರತ್, ಮುಂಬೈ ಮತ್ತು ಥಾಣಗಳಲ್ಲಿಯ ತನಗೆ ಸಂಬಂಧಿಸಿದ ನಿವಾಸಗಳು ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಏಕಕಾಲದಲ್ಲಿ ದಾಳಿಗಳನ್ನು ನಡೆಸಿರುವುದನ್ನು ಪ್ರತಿಭಟಿಸಿ ಸೂರತ್ ಬಿಜೆಪಿ ಘಟಕದ ಉಪಾಧ್ಯಕ್ಷ ಪಿವಿಎಸ್ ಶರ್ಮಾ ಗುರುವಾರ ಸೂರತ್‌ನ ತನ್ನ ನಿವಾಸದ ಹೊರಗೆ ಪ್ರತಿಭಟನೆಯನ್ನು ನಡೆಸಿದರು.

 1,000 ಮತ್ತು 500 ರೂ.ನೋಟುಗಳ ರದ್ದತಿಯನ್ನು ಘೋಷಿಸಲಾಗಿದ್ದ 2016,ನ.8ರಂದು ರಾತ್ರಿ ಸೂರತ್‌ನ ಚಿನ್ನಾಭರಣಗಳ ಮಳಿಗೆಯೊಂದು ಆದಾಯ ತೆರಿಗೆ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಶಾಮೀಲಾತಿಯೊಂದಿಗೆ 110 ಕೋ.ರೂ. ಮೌಲ್ಯದ ಚಿನ್ನಾಭರಣಗಳನ್ನು ಮಾರಾಟ ಮಾಡುವ ಮೂಲಕ ಭಾರೀ ಪ್ರಮಾಣದಲ್ಲಿ ತೆರಿಗೆಯನ್ನು ವಂಚಿಸಿತ್ತು. ಕಪ್ಪುಹಣವನ್ನು ಬಯಲಿಗೆಳೆದು ಅದನ್ನು ದೇಶದ ಅಭಿವೃದ್ಧಿಗಾಗಿ ಬಳಸುವುದು ನೋಟು ನಿಷೇಧದ ಹಿಂದಿನ ಉದ್ದೇಶವಾಗಿತ್ತು. ಆದರೆ ಇಂತಹ ಅಪ್ರಾಮಾಣಿಕ ವ್ಯವಹಾರ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಈ ಉದ್ದೇಶವನ್ನೇ ವಿಫಲಗೊಳಿಸಿದ್ದವು ಎಂದು ಶರ್ಮಾ ಕೆಲವು ದಿನಗಳ ಹಿಂದೆ ಸರಣಿ ಟ್ವೀಟ್‌ಗಳಲ್ಲಿ ಆರೋಪಿಸಿದ್ದರು.

ಶರ್ಮಾ 2007ರಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ರಾಜಕೀಯ ರಂಗವನ್ನು ಪ್ರವೇಶಿಸುವ ಮುನ್ನ 18 ವರ್ಷಗಳ ಕಾಲ ಹಿರಿಯ ಆದಾಯ ತೆರಿಗೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಸೂರತ್‌ನ ಹಲವಾರು ಕಂಪನಿಗಳ ನಿರ್ದೇಶಕರೂ (ಹಣಕಾಸು ಮತ್ತು ತೆರಿಗೆ) ಆಗಿರುವ ಅವರು ಸತ್ಯಂ ಟೈಮ್ಸ್ ಪ್ರಾದೇಶಿಕ ದೈನಿಕದ ಮಾಲಿಕರೂ ಆಗಿದ್ದಾರೆ.

ಶರ್ಮಾರ ಅಕ್ರಮ ಸಂಪತ್ತಿಗೆ ಸಂಬಂಧಿಸಿದಂತೆ ಅವರಿಗೆ ಅ.1ರಂದು ಸಮನ್ಸ್ ಜಾರಿ ಮಾಡಲಾಗಿತ್ತು. ಅದಕ್ಕೆ ಉತ್ತರಿಸಲು ಅವರು ವಿಫಲಗೊಂಡ ಬಳಿಕವೇ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದು ಐಟಿ ತನಿಖಾಧಿಕಾರಿಗಳು ತಿಳಿಸಿದರು. ಆದರೆ ತಾನು ಹಗರಣವೊಂದನ್ನು ಬಯಲಿಗೆಳೆದಿದ್ದರಿಂದಲೇ ತನ್ನನ್ನು ಐಟಿ ಅಧಿಕಾರಿಗಳು ಗುರಿಯಾಗಿಸಿಕೊಂಡಿದ್ದಾರೆ ಎಂದು ಶರ್ಮಾ ಆರೋಪಿಸಿದ್ದಾರೆ.

70ಕ್ಕೂ ಅಧಿಕ ಐಟಿ ಅಧಿಕಾರಿಗಳು 15 ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದ್ದಾರೆ. ಬುಧವಾರ ಬೆಳಿಗ್ಗೆ ಆರಂಭಗೊಂಡ ಶೋಧ ಕಾರ್ಯಾಚರಣೆಗಳು ಗುರುವಾರವೂ ಮುಂದುವರಿದಿದ್ದವು. ಶರ್ಮಾರ ಲೆಕ್ಕ ಪರಿಶೋಧಕರ ಕಚೇರಿ,ಅವರು ನಿರ್ದೇಶಕರಾಗಿರುವ ಕಂಪನಿಗಳ ಕಚೇರಿಗಳ ಮೇಲೂ ದಾಳಿಗಳು ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News