ಉಡುಪಿ ನಗರಸಭೆಯಿಂದ ದಲಿತರ ಮೀಸಲು ಹಣದಲ್ಲಿ ಅವ್ಯವಹಾರ: ದಸಂಸ ಆರೋಪ

Update: 2020-10-24 13:13 GMT

ಉಡುಪಿ, ಅ.24: ಉಡುಪಿ ನಗರಸಭೆಯಿಂದ ದಲಿತರ ಮೀಸಲು ಹಣದಲ್ಲಿ ಮುಖ್ಯಮಂತ್ರಿ ಆರೋಗ್ಯ ವಿಮಾ ಯೋಜನೆಯಡಿ ವಿತರಿಸುವ ಆರೋಗ್ಯ ಕಾರ್ಡ್‌ಗಳನ್ನು ಸತ್ತವರ ಹೆಸರಿನಲ್ಲೂ ಪ್ರೀಮಿಯಂ ಪಾವತಿಸಿ ಲಕ್ಷಾಂತರ ರೂ. ಅವ್ಯವಹಾರ ಎಸಗಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎಂಟು ವರ್ಷಗಳಿಂದ ಈ ಯೋಜನೆಯಡಿ ಮೀಸಲು ಹಣದಲ್ಲಿ 5.24 ಕೋಟಿ ರೂ. ವಿನಿಯೋಗಿಸಿದ್ದು, ಖಾಸಗಿ ಇನ್ಶೂರೆನ್ಸ್ ಕಂಪೆನಿಯೊಂದಿಗೆ ನಗರ ಸಭೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ದೂರಿದರು.

ಮೂಡಬೆಟ್ಟು ಒಂದೇ ವಾರ್ಡಿನಲ್ಲಿ ಮೃತಪಟ್ಟ 30 ಜನರ ಹೆಸರಿನಲ್ಲಿ ಪ್ರೀಮಿಯಂ ಪಾವತಿಸಲಾಗಿದೆ. ಹಾಗಾದರೆ ಎಲ್ಲ 35 ವಾರ್ಡ್‌ಗಳಲ್ಲಿ ಸಾಕಷ್ಟು ಮಂದಿ ಸತ್ತವರ ಹೆಸರಿನಲ್ಲಿ ಪ್ರೀಮಿಯಂ ಪಾವತಿಸಿರಬಹುದು. ಈ ಆರೋಗ್ಯ ಕಾರ್ಡ್ ಗಳನ್ನು ಸಂಬಂಧಪಟ್ಟ ಕಂಪೆನಿ ಅಥವಾ ನಗರಸಭೆ ವಿತರಿಸುವುದಿಲ್ಲ. ಆದುದರಿಂದ ಶೇ.50ರಷ್ಟು ಮಂದಿಗೆ ಈ ಕಾರ್ಡ್ ಇರುವುದೇ ಗೊತ್ತಿಲ್ಲ. ಹೀಗೆ ಒಂದು ವರ್ಷಕ್ಕೆ ಒಟ್ಟು 50 ಲಕ್ಷ ರೂ. ಪ್ರೀಮಿಯಂ ಪಾವತಿಸಲಾಗುತ್ತದೆ ಎಂದು ಅವರು ತಿಳಿಸಿದರು.

'ಇಂದಿರಾ ಕ್ಯಾಂಟೀನ್‌ನಲ್ಲಿ ಲೂಟಿ'

ಉಡುಪಿ ನಗರಸಭೆ ವ್ಯಾಪ್ತಿಯ ಎರಡು ಇಂದಿರಾ ಕ್ಯಾಂಟೀನ್‌ಗಳನ್ನು ಜನ ಸರಿಯಾಗಿ ಬಳಕೆ ಮಾಡದಿದ್ದರೂ ಪ್ರತಿ ತಿಂಗಳಿಗೆ ಬೆಳಗಿನ ಉಪಹಾರ 30,000 ಪ್ಲೇಟ್, ಅಪರಾಹ್ನದ ಊಟ 28,000 ಪ್ಲೇಟ್, ರಾತ್ರಿ ಊಟ 10 ಸಾವಿರ ಪ್ಲೇಟ್‌ಗಳ ನಕಲಿ ಬಿಲ್‌ಗಳನ್ನು ತಯಾರಿಸಿ, ಕಳಪೆ ಊಟ ನೀಡಿ ಲಕ್ಷಾಂತರ ರೂ. ಕೊಳ್ಳೆ ಹೊಡೆಯಲಾಗುತ್ತಿದೆ. ಕಳೆದ 2 ವರ್ಷಗಳಲ್ಲಿ ಅಂದಾಜು 84 ಲಕ್ಷ ರೂ. ಬಿಲ್ ಮಾಡಾಗಿದೆ ಎಂದು ಅವರು ಆರೋಪಿಸಿದರು.

ನಗರಸಭೆಗೆ ಬಂದಿರುವ ಎಸ್‌ಸಿಪಿ ಮತ್ತು ಟಿಸಿಪಿ ಅನುದಾನವನ್ನು ದಲಿತ ಕಾಲನಿಯ ರಸ್ತೆ, ಚರಂಡಿ, ಕುಡಿಯುವ ನೀರಿಗೆ ಬಳಕೆ ಮಾಡುವ ಬದಲು ನಗರಸಭೆಯ ಎಲ್ಲ ವರ್ಗದ ಪೌರಕಾರ್ಮಿಕರ ಊಟ ತಿಂಡಿಗೆ ಖರ್ಚು ಮಾಡುವ ಮೂಲಕ ದುರ್ಬಳಕೆ ಮಾಡಲಾಗಿದೆ. ಉತ್ತಮವಾದ ರಸ್ತೆಗೆ ಎರಡೆರಡು ಬಾರಿ ಕಾಮಗಾರಿ ನಡೆಸಿ ಹಣ ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಮಂಜುನಾಥ ಬಾಳ್ಕುದ್ರು, ತಾಲೂಕು ಸಂಚಾಲಕ ಶಂಕರದಾಸ್, ಕಾಪು ಸಂಚಾಲಕ ವಿಠಲ ಉಚ್ಚಿಲ, ನಗರ ಸಂಚಾಲಕ ಶಿವಾನಂದ ಮೂಡುಬೆಟ್ಟು, ಎಸ್.ಎಸ್.ಪ್ರಸಾದ್, ಭಾಸ್ಕರ್ ಮಾಸ್ತರ್ ಉಪಸ್ಥಿತರಿದ್ದರು.

ರಾಜಕೀಯ ಪ್ರೇರಿತ ನೇಮಕಾತಿ

ನಗರಸಭೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯವರ ಸಂಖ್ಯೆ ಹೆಚ್ಚಾಗಿದ್ದರೂ ನೇಮಕಾತಿಯಲ್ಲಿ ಪರಿಶಿಷ್ಟ ಪಂಗಡದವರ ಸಂಖ್ಯೆ ಜಾಸ್ತಿಯಾಗಿದೆ. ಇದು ರಾಜಕೀಯ ಪ್ರೇರಿತ ನೇಮಕಾತಿಯಾಗಿದೆ. ಪೌರಕಾರ್ಮಿಕರಿಗೆ ಕಳಪೆ ಸಮವಸ್ತ್ರ, ರೈನ್‌ಕೋಟ್ ಇನ್ನಿತರ ವಸ್ತುಗಳನ್ನು ವಿತರಿಸಲಾಗಿದೆ. ನಗರಸಭೆಯ ಎಲ್ಲ ಜಾತಿಯ ನೌಕರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಮೂಲಕ ಮೀಸಲು ಹಣ ದುರ್ಬಳಕೆ ಮಾಡಲಾಗಿದೆ ಎಂದು ಸುಂದರ್ ಮಾಸ್ತರ್ ಆರೋಪಿಸಿದರು.

ಜಿಲ್ಲಾಡಳಿತಕ್ಕೆ 15 ದಿನಗಳ ಗಡುವು

ಈ ಎಲ್ಲ ಮಾಹಿತಿಗಳನ್ನು ನಗರಸಭೆಯ ಕಡತಗಳಿಂದ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಲೋಕಾಯುಕ್ತರಿಂದ ತನಿಖೆ ನಡೆಸಬೇಕು. ಆರೋಗ್ಯ ಮತ್ತು ಪರಿಸರ ವಿಭಾಗದ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಸುಂದರ್ ಮಾಸ್ತರ್ ಒತ್ತಾಯಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು. ದುರ್ಬಳಕೆಯ ಹಣ ಮರುಪಾವತಿ ಮಾಡಬೇಕು. ಈ ಬಗ್ಗೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದರೆ ಮುಂದಿನ 15 ದಿನಗಳ ನಂತರ ಸೂಕ್ತ ತನಿಖೆಗೆ ಒತ್ತಾಯಿಸಿ ನಗರಸಭೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News