ನಗರಸಭೆ ಕಸ ವಿಲೇವಾರಿಯ ವಾರ್ಡ್ ಹಂಚಿಕೆಯಲ್ಲಿ ದಲಿತ ಮಹಿಳೆಗೆ ಅನ್ಯಾಯ: ಆರೋಪ

Update: 2020-10-24 13:21 GMT

ಉಡುಪಿ, ಅ.24: ಹಲವು ಸ್ವಸಹಾಯ ಗುಂಪಿನ ಸದಸ್ಯರೊಂದಿಗೆ ಸ್ವಂತ ವಾಹನ ಖರೀದಿಸಿ ಕಳೆದ 20ವರ್ಷಗಳಿಂದ ತಾನೆ ವಾಹನ ಚಲಾಯಿಸಿ ಕೊಂಡು ಮನೆಮನೆ ಕಸ ಸಂಗ್ರಹಿಸಿ ವಿಲೇವಾರಿ ಮಾಡುತ್ತಿದ್ದ ದಲಿತ ಮಹಿಳೆ ಸುಂದರಿ ಪುತ್ತೂರು ಅವರಿಗೆ ಉಡುಪಿ ನಗರಸಭೆ ಯಿಂದ ಅನ್ಯಾಯ ಮಾಡಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆರೋಪಿಸಿದೆ.

‘ನಗರಸಭೆಯವರು ಕಸ ವಿಲೇವಾರಿಗಾಗಿ ಹೊಸ ವಾಹನಗಳನ್ನು ಖರೀದಿಸಿ ವಾರ್ಡ್‌ಗಳನ್ನು ಸ್ವಸಹಾಯ ಗುಂಪುಗಳಿಗೆ ಹಂಚಿಕೆ ಮಾಡಿದೆ. ಆಗ ಸುಂದರಿ ಪುತ್ತೂರು ವಿರುದ್ಧ ದೂರುಗಳಿವೆ ಎಂದು ಹೇಳಿ ಮೊದಲು ದುಡಿಯುತ್ತಿದ್ದ ವಾರ್ಡ್‌ನ್ನು ಕಿತ್ತುಕೊಂಡು ದೂರದ ವಾರ್ಡ್ ನೀಡಲಾಗಿದೆ. ಆದರೆ ಮಾಹಿತಿ ಹಕ್ಕಿನಡಿ ಪಡೆದ ದಾಖಲೆಯಲ್ಲಿ ಅವರ ಮೇಲೆ ಯಾವುದೇ ದೂರುಗಳು ಇಲ್ಲದಿರುವುದು ಕಂಡುಬಂದಿದೆ’

‘ಈ ಬಗ್ಗೆ ಜಿಲ್ಲಾಧಿಕಾರಿ ಬಳಿ ಕೇಳಿದರೆ ಪೌರಾಯುಕ್ತರನ್ನು ತೋರಿಸುತ್ತಾರೆ. ಪೌರಾಯುಕ್ತರು ಶಾಸಕರಲ್ಲಿ ಕೇಳಿ ಎಂದು ಹೇಳುತ್ತಾರೆ. ಶಾಸಕರು ತ್ಮಮ ಪಕ್ಷದ ನಗರಸಭೆ ಸದಸ್ಯರು ಹೇಳಿದವರಿಗೆ ಮಾತ್ರ ವಾರ್ಡ್‌ಗಳನ್ನು ನೀಡುತ್ತೇವೆ ಎಂದು ಹೇಳುತ್ತಾರೆ. ಇದರಿಂದ ನಗರಸಭೆ ಆಡಳಿತ ವನ್ನು ಶಾಸಕರು ನಡೆಸುತ್ತಿದ್ದಾರೆಯೇ ಎಂಬ ಸಂಶಯ ಮೂಡುತ್ತದೆ’ ಎಂದು ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ದೂರಿದರು.

ಸುಂದರಿ ಪುತ್ತೂರು ಅಳಲು

‘ಆರಂಭದಿಂದಲೂ ಕಸ ವಿಲೇವಾರಿ ಕೆಲಸವನ್ನು ಕಷ್ಟಪಟ್ಟು ಮಾಡಿಕೊಂಡು ಬಂದಿದ್ದೇನೆ. ಇದರಿಂದಲೇ ನಮ್ಮ ಜೀವನ ನಿರ್ವಹಣೆ ಮಾಡಲಾ ಗುತ್ತಿದೆ. ಆದರೆ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಸಕರು ಅವರೊಳಗೆ ಮಾತುಕತೆ ನಡೆಸಿ, ನಾವು ಈ ಹಿಂದೆ ಕೆಲಸ ಮಾಡುತ್ತಿದ್ದ ವಾರ್ಡ್‌ಗಳನ್ನು ವಾಪಾಸ್ಸು ಪಡೆದು, ನಗರಸಭೆ ಸದಸ್ಯರು ಸೂಚಿಸಿದ ಗುಂಪುಗಳಿಗೆ ವಹಿಸಿ ಕೊಟ್ಟಿದ್ದಾರೆ’ ಎಂದು ಸುಂದರಿ ಪುತ್ತೂರು ಅಳಲು ತೋಡಿಕೊಂಡರು.

‘ನಮಗೆ ಯಾವುದೇ ಆದಾಯ ಇಲ್ಲದ ದೂರದ ಸೆಟ್ಟಿಬೆಟ್ಟು ಒಂದು ವಾರ್ಡ್‌ನ್ನು ಮಾತ್ರ ನೀಡಿದ್ದಾರೆ. ಇಲ್ಲಿ ಬರುವ 20-22ಸಾವಿರ ರೂ. ಆದಾಯದಲ್ಲಿ ನೌಕರರ ಸಂಬಳ, ವಾಹನ ವೆಚ್ಚ, ನಗರಸಭೆ ಡೆಪಾಸಿಟ್ ಪಾವತಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಯಾವುದೇ ಹಣ ಉಳಿತಾಯ ಕೂಡ ಆಗುತ್ತಿಲ್ಲ ಎಂದು ಅವರು ದೂರಿದರು.

‘ನಮ್ಮ ಮನೆಯಲ್ಲಿ ನಾನೇ ದುಡಿದು ಕುಟುಂಬ ನಿರ್ವಹಣೆ ಮಾಡುತ್ತಿದ್ದೇನೆ. ಈ ಹಿಂದೆ ನಾವು ಕಸವಿಲೇವಾರಿಗಾಗಿ ಎರಡು ಮೂರು ವಾಹನಗಳನ್ನು ಖರೀದಿಸಿದ್ದೇವೆ. ಇದೀಗ ನಗರಸಭೆ ಹೊಸ ವಾಹನ ಖರೀದಿಸಿದ ನಂತರ ಅವುಗಳು ಮೂಲೆಗುಂಪು ಆಗಿವೆ. ಅದಕ್ಕೆ ಬ್ಯಾಂಕ್ ಸಾಲ ಕೂಡ ಇದೆ. ನಮ್ಮ ಅಳಲನ್ನು ಶಾಸಕರು, ಜಿಲ್ಲಾಧಿಕಾರಿ, ಪೌರಾಯುಕ್ತರಲ್ಲಿ ತೋಡಿಕೊಂಡರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅವರು ದೂರಿದರು.

ಇಂದು ಉಡುಪಿ ಶಾಸಕ ಕೆ.ರಘುಪತಿ ಅಣತಿಯಂತೆ ನಗರಸಭೆ ಆಡಳಿತ ನಡೆಯುತ್ತಿದೆ. ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗೂ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ಲವಾಗಿದೆ. ಇಷ್ಟೆಲ್ಲ ಅವ್ಯವಹಾರ ನಡೆಯುತ್ತಿದ್ದರೂ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ.

-ಶ್ಯಾಮ್‌ರಾಜ್ ಬಿರ್ತಿ, ಜಿಲ್ಲಾ ಸಂಘಟನಾ ಸಂಚಾಲಕರು, ದಸಂಸ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News