ಬಂಟ್ವಾಳದಲ್ಲಿ ಯುವಕನ ಕೊಲೆ ಪ್ರಕರಣ : ಮತ್ತೆ ಇಬ್ಬರು ಸೆರೆ

Update: 2020-10-24 14:24 GMT

ಬಂಟ್ವಾಳ, ಅ.24: ರೌಡಿ ಶೀಟರ್ ಉಮರ್ ಫಾರೂಕ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಶನಿವಾರ ಬೆಳ್ಳಂಬೆಳಗ್ಗೆ ಗುಂಡ್ಯದಲ್ಲಿ ಗುಂಡು ಹಾರಿಸಿ ಬಂಧಿಸಿರುವ ಪೊಲೀಸರು ಈ ವೇಳೆ ತಪ್ಪಿಸಿಕೊಂಡ ಇತರ ಇಬ್ಬರು ಆರೋಪಿಗಳನ್ನು ಬಳಿಕ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಪಾಣೆಮಂಗಳೂರು ಸಮೀಪದ ನಂದಾವರ ಕೋಟೆ ನಿವಾಸಿ ಖಲೀಲ್ ಯಾನೆ ಇಬ್ರಾಹೀಂ ಖಲೀಲ್(27) ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಈತನ ಬಂಧನವನ್ನು ಪೊಲೀಸರು ದೃಢಪಡಿಸಿದ್ದಾರೆ. ಹಫೀಝ್ ಯಾನೆ ಅಪ್ಪಿ(28) ಮತ್ತು ಇರ್ಷಾದ್(26) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಆದರೆ ಇದನ್ನು ಪೊಲೀಸರು ದೃಢಪಡಿಸಿಲ್ಲ.

ಖಲೀಲ್ ಮತ್ತು ಹಫೀಝ್ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದ್ದು ಇರ್ಷಾದ್ ಕಾರು ಚಾಲಕನಾಗಿ ಸಹಾಯ ಮಾಡಿದ ಆರೋಪಿ ಎಂದು ಹೇಳಲಾಗಿದೆ‌.

ಆರೋಪಿಗಳು ಕಾರಿನಲ್ಲಿ ಬೆಂಗಳೂರಿಗೆ ಪರಾರಿಯಾಗುತ್ತಿದ್ದ ವೇಳೆ ಗುಂಡ್ಯದಲ್ಲಿ ಕಾರನ್ನು ಅಡ್ಡಗಟ್ಟಿದ ಪೊಲೀಸರು ಆರೋಪಿಗಳನ್ನು ಬಂಧಿಸಲು ಮುಂದಾದಾಗ ಆರೋಪಿಗಳು ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದರು ಎನ್ನಲಾಗಿದೆ. ಈ ವೇಳೆ ಪ್ರಮುಖ ಆರೋಪಿ ಖಲೀಲ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಆರೋಪಿಗಳು ಪಕ್ಕದ ಗುಡ್ಡೆಗೆ ಓಡಿ ಪರಾರಿಯಾಗಿದ್ದು ಬಳಿಕ ಅವರನ್ನೂ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಕಾರ್ಯಾಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ಅವರು ಗಾಯಗೊಂಡಿದ್ದಾರೆ‌. ಪೊಲೀಸರು ಗುಂಡು ಹಾರಿಸಿದ ಪರಿಣಾಮ ಆರೋಪಿಯ ಕಾಲಿಗೂ ಗಾಯವಾಗಿದ್ದು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ‌.

ಪ್ರಕರಣದ ಆರೋಪಿ ಖಲೀಲ್ ಈ ಹಿಂದೆಯೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೋಮು ಗಲಭೆ ಸಹಿತ ಆನೇಕ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದು , ಈತನ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ರೌಡಿಶೀಟ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News