ಬಿಹಾರಕ್ಕೆ ಮಾತ್ರ ಉಚಿತ ಲಸಿಕೆ ನೀಡುವುದಾದರೆ ಇತರ ರಾಜ್ಯಗಳು ಪುಟಿನ್‌ರನ್ನು ಕೇಳಬೇಕೇ ?: ಶಿವಸೇನೆ

Update: 2020-10-24 16:25 GMT

ಹೊಸದಿಲ್ಲಿ, ಅ.24: ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಉಚಿತವಾಗಿ ಕೊರೋನ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆಯನ್ನು ಟೀಕಿಸಿರುವ ಶಿವಸೇನೆ, ಬಿಹಾರ ಉಚಿತ ಲಸಿಕೆ ಪಡೆಯಬೇಕು. ಆದರೆ ಇತರ ರಾಜ್ಯಗಳು ಪಾಕಿಸ್ತಾನದಲ್ಲಿಲ್ಲ ಎಂದು ಹೇಳಿದೆ.

ಪಕ್ಷದ ಮುಖವಾಣಿ ‘ಸಾಮ್ನ’ದ ಸಂಪಾದಕೀಯ ಬರಹದಲ್ಲಿ ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಶಿವಸೇನೆ ಮುಖಂಡ ಸಂಜಯ್ ರಾವತ್, ಬಿಹಾರಕ್ಕೆ ಮಾತ್ರ ಉಚಿತ ಲಸಿಕೆ ನೀಡುವುದಾದರೆ ಇತರ ರಾಜ್ಯಗಳು ಕೊರೋನ ಲಸಿಕೆಗಾಗಿ ರಶ್ಯದ ಅಧ್ಯಕ್ಷ ಪುಟಿನ್‌ರನ್ನು ಕೇಳಬೇಕೇ ? ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆ ‘ನಿಮ್ಮ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂಬ ಘೋಷಣೆಯಿತ್ತು. ಆದರೆ ಈಗ ನಿಮ್ಮ ಓಟು ಕೊಡಿ, ನಿಮಗೆ ಉಚಿತ ಲಸಿಕೆ ಕೊಡಿಸುತ್ತೇನೆ ಎಂಬ ಘೋಷಣೆ ಕೇಳಿಬರುತ್ತಿದೆ’ ಎಂದು ರಾವತ್ ಟೀಕಿಸಿದ್ದಾರೆ.

 ಕೊರೋನ ವಿರುದ್ಧದ ಲಸಿಕೆ ಸಿದ್ಧವಾದರೆ ಅದನ್ನು ಉಚಿತವಾಗಿ ಪಡೆಯುವ ಹಕ್ಕು ಎಲ್ಲಾ ರಾಜ್ಯಗಳಿಗೂ ಇದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ, ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಪ್ರತಿಕ್ರಿಯಿಸಿದ್ದಾರೆ. ಕೊರೋನ ಲಸಿಕೆಯ ಉಚಿತ ವಿತರಣೆ ಭರವಸೆಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸಿನೆಮಾ ನಟ ಕಮಲಹಾಸನ್, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಸಹಿತ ಹಲವರು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News