×
Ad

ದಿಲ್ಲಿ: ಪೊಲೀಸ್ ಸಿಬ್ಬಂದಿಯನ್ನು ಬಸ್ ನಲ್ಲಿ ಅಪಹರಿಸಿ ಹಲ್ಲೆ; ಚಾಲಕ ಸಹಿತ ಇಬ್ಬರ ಬಂಧನ

Update: 2020-10-25 00:18 IST

ಹೊಸದಿಲ್ಲಿ, ಅ.24: ಬಸ್ಸಿನಲ್ಲಿ ಸಹಾಯಕ್ಕಾಗಿ ಮಹಿಳೆಯ ಕಿರುಚಾಟ ಕೇಳಿ ಪರಿಶೀಲನೆಗೆಂದು ಬಸ್ಸೇರಿದ ಪೊಲೀಸ್ ಸಿಬ್ಬಂದಿಯನ್ನು ಬಸ್ ನಲ್ಲೇ ಅಪಹರಿಸಿ, ಸಮವಸ್ತ್ರ ಕಳಚಿಹಾಕಿ ಹಲ್ಲೆಗೈದ ಘಟನೆ ನಡೆದಿದ್ದು ಇದಕ್ಕೆ ಸಂಬಂಧಿಸಿ ಬಸ್ ನ ಚಾಲಕ ಮತ್ತು ಆತನ ಪುತ್ರನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಬುಧವಾರ ಪರ್ಮಿಟ್ ಇಲ್ಲದೆ ಸಂಚರಿಸುತ್ತಿದ್ದ ಈ ಖಾಸಗಿ ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದರು. ಬಸ್ ನಲ್ಲಿದ್ದ ಮಹಿಳೆಯೊಬ್ಬಳು ಸಹಾಯಕ್ಕಾಗಿ ಕಿರುಚಿದಾಗ ಆ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಸಚಿನ್ ಬಸ್ಸನ್ನು ಏರಿ ಪರಿಶೀಲನೆಗೆ ಮುಂದಾಗಿದ್ದಾರೆ. ಆಗ ಚಾಲಕ ಹಾಗೂ ಆತನ ಪುತ್ರ ಸೇರಿಕೊಂಡು ಪೊಲೀಸ್ ಸಿಬ್ಬಂದಿಯನ್ನು ಬಸ್ ನಲ್ಲೇ ಅಪಹರಿಸಿದ್ದಾರೆ. ಬಳಿಕ ಆತನ ಸಮವಸ್ತ್ರ ಕಳಚಿಹಾಕಿ ಹಲ್ಲೆಗೈದಿದ್ದಾರೆ. ಅಲ್ಲದೆ ‘ತಾನು ಬಸ್ ನ ಪ್ರಯಾಣಿಕರ ಹಣ, ವಸ್ತುಗಳನ್ನು ಲೂಟಿ ಮಾಡಲು ಬಂದಿದ್ದೆ’ ಎಂದು ಹೇಳುವಂತೆ ಬಲವಂತಗೊಳಿಸಿ ಆತನನ್ನು ಉತ್ತರಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಬಿಡುಗಡೆಗೊಳಿಸಿದ್ದಾರೆ. ಬಳಿಕ ಈ ಹೇಳಿಕೆಯ ವೀಡಿಯೊ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವೈರಲ್ ಆಗಿರುವ ವೀಡಿಯೊದಲ್ಲಿ ತನ್ನ ಸರ್ವಿಸ್ ರಿವಾಲ್ವರ್ ಹಿಡಿದುಕೊಂಡಿದ್ದ ಮತ್ತು ಬಟ್ಟೆಯಿಲ್ಲದ ಪೊಲೀಸ್ ಸಿಬ್ಬಂದಿ ಬಸ್ ನ ನೆಲದ ಮೇಲೆ ಕುಳಿತು ತಪ್ಪೊಪ್ಪಿಗೆ ಹೇಳಿಕೆ ನೀಡುತ್ತಿರುವುದು ಮತ್ತು ಈತನ ಹಣೆಯಲ್ಲಾದ ಗಾಯದಿಂದ ರಕ್ತ ಸುರಿಯುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಪ್ರಕರಣದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಭಿಂಡ್ ಗ್ರಾಮದ ನಿವಾಸಿಯಾಗಿದ್ದ ಬಸ್ ಚಾಲಕ ಮುನ್ನಾ ಚೌರಾಸಿಯಾ ಮತ್ತಾತನ ಪುತ್ರ ಅಂಕಿತ್ ಚೌರಾಸಿಯಾನನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಚೌರಾಸಿಯಾನ ಮನೆಯವರು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮುನ್ನಾ ಚೌರಾಸಿಯಾ ಮತ್ತು ಅಂಕಿತ್ ಚೌರಾಸಿಯಾನನ್ನು ಬಂಧಿಸಲಾಗಿದ್ದು ಮಧ್ಯಪ್ರದೇಶ ಪೊಲೀಸರು ಬಂಧಿತರಿಬ್ಬರ ಮೇಲೆ ಬಸ್ಸಿನಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಕ್ಕೆ ಮತ್ತು ಅಪರಿಚಿತ ಆರೋಪಿಗಳ ವಿರುದ್ಧ ಪೊಲೀಸ್ ತಂಡದ ಮೇಲೆ ಹಲ್ಲೆ ನಡೆಸಿದ್ದಕ್ಕೆ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News