“ಒಂದಾದರೂ ಶಾಲಾ-ಕಾಲೇಜು ಆರಂಭಿಸಿದ್ದಾರೆಯೇ ಎಂದು ನಿಮ್ಮ ತಂದೆಯನ್ನು ಕೇಳಿ”

Update: 2020-10-24 18:54 GMT

ಪಾಟ್ನಾ, ಅ.24: ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರದ ಕಾವು ಹೆಚ್ಚುತ್ತಿರುವಂತೆಯೇ ರಾಜಕೀಯ ಮುಖಂಡರ ಪರಸ್ಪರ ಟೀಕಾಪ್ರಹಾರವೂ ವೇಗ ಪಡೆದುಕೊಂಡಿದೆ. ಈ ಮಧ್ಯೆ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಚುನಾವಣಾ ರ್ಯಾಲಿಯೊಂದರಲ್ಲಿ ತಮ್ಮ ಪ್ರಮುಖ ಇದಿರಾಳಿ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದಾರೆ.

‘ಇತರ ಜನರಿಗೂ ಆಡಳಿತ ನಡೆಸುವ ಅವಕಾಶ ಲಭಿಸಿತ್ತು. ಆದರೆ ಅವರೇನು ಮಾಡಿದರು? ಒಂದಾದರೂ ಶಾಲೆ, ಕಾಲೇಜುಗಳನ್ನು ಆರಂಭಿಸಿದ್ದಾರೆಯೇ? ನಿಮ್ಮ ತಂದೆ-ತಾಯಿಯನ್ನು ಕೇಳಿ ನೋಡಿ. ಅವರ ಅವಧಿಯಲ್ಲಿ ಶಾಲೆ-ಕಾಲೇಜು ಆರಂಭವಾಗಿತ್ತೇ. ಅವರು ಆಡಳಿತ ನಡೆಸಿದರು, ಅಕ್ರಮವಾಗಿ ಹಣ ಸಂಪಾದಿಸಿದರು ಮತ್ತು ಜೈಲಿಗೆ ಹೋದರು. ಜೈಲಿಗೆ ಹೋಗುವಾಗ ಅವರ ಪತ್ನಿಯನ್ನು ಕುರ್ಚಿಯಲ್ಲಿ ಪ್ರತಿಷ್ಠಾಪಿಸಿದರು. ಇದು ಬಿಹಾರದಲ್ಲಿ ನಡೆಯುತ್ತಿದ್ದ ವಿದ್ಯಮಾನ. ಆದರೆ ಈಗ ನನ್ನ ಸರಕಾರದ ಅವಧಿಯಲ್ಲಿ, ಯಾರಾದರೂ ತಪ್ಪೆಸಗಿದ್ದರೆ, ಕಾನೂನನ್ನು ಉಲ್ಲಂಘಿಸಿದರೆ ಅವರು ನೇರವಾಗಿ ಜೈಲಿಗೆ ಹೋಗುತ್ತಾರೆ’ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

     ತೇಜಸ್ವಿ ಯಾದವ್ ತಂದೆ ಲಾಲೂಪ್ರಸಾದ್ ಯಾದವ್ ಮತ್ತು ತಾಯಿ ರಾಬ್ಡಿ ದೇವಿ ಬಿಹಾರದ ಮಾಜಿ ಮುಖ್ಯಮಂತ್ರಿಗಳಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ತೇಜಸ್ವಿ ಯಾದವ್ ವಿಪಕ್ಷ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಪ್ರಮಾಣ ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಯ ವಿಷಯ ಈ ಚುನಾವಣೆಯಲ್ಲಿ ವಿಪಕ್ಷಗಳ ಪ್ರಮುಖ ಅಜೆಂಡಾವಾಗಿದ್ದು , ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್(ದಿವಂಗತ ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಪುತ್ರ) ನಿತೀಶ್ ನಾಯಕತ್ವದ ವಿರುದ್ಧ ಸಿಡಿದೆದ್ದು ಸವಾಲು ಹಾಕಿರುವುದು ನಿತೀಶ್ ಕುಮಾರ್‌ಗೆ ಬಹುದೊಡ್ಡ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗಿದೆ.

ಚುನಾವಣೆಯಲ್ಲಿ ಗೆದ್ದು ಬಂದರೆ 10 ಲಕ್ಷ ಉದ್ಯೋಗಾವಕಾಶ ಒದಗಿಸಲಾಗುವುದು ಎಂಬ ತೇಜಸ್ವಿ ಯಾದವ್ ಭರವಸೆಯನ್ನು ಮಂಗಳವಾರ ಗೇಲಿ ಮಾಡಿದ್ದ ನಿತೀಶ್ ಕುಮಾರ್, ಬಹುಷಃ ನಿಮ್ಮ ತಂದೆ ಸರಕಾರದ ಖಜಾನೆಯನ್ನು ಲೂಟಿ ಮಾಡಿ ಹಗರಣಗಳಿಂದ ಗುಡ್ಡೆ ಹಾಕಿರುವ ಸಂಪತ್ತಿನಿಂದ ಈ 10 ಲಕ್ಷ ಸಿಬ್ಬಂದಿಗಳ ಸಂಬಳ ಪಾವತಿಸುತ್ತೇನೆ ಎಂಬ ವಿಶ್ವಾಸ ನಿಮಗಿರಬಹುದು ಎಂದು ಹೇಳಿದ್ದರು.

ಇದಕ್ಕೆ ಇದಿರೇಟು ನೀಡಿದ್ದ ಯಾದವ್, ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿದಿರುವ ನಿತೀಶ್ ಕುಮಾರ್, ಜಾಹೀರಾತಿನಲ್ಲಿ ತಮ್ಮ ಮುಖದ ಬಿಳುಪು ಹೆಚ್ಚಿಸಲೆಂದೇ ಸರಕಾರದ 500 ಕೋಟಿ ರೂ. ವೆಚ್ಚ ಮಾಡಿದ್ದಾರೆ ಎಂದು ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News