ಕಾಶ್ಮೀರ : ಜನಮೈತ್ರಿಕೂಟಕ್ಕೆ ಫಾರೂಕ್ ಅಬ್ದುಲ್ಲಾ ಅಧ್ಯಕ್ಷ

Update: 2020-10-25 04:14 GMT

ಶ್ರೀನಗರ : ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸುವ ಉದ್ದೇಶದಿಂದ ರಚಿಸಿರುವ ಏಳು ಪ್ರಮುಖ ರಾಜಕೀಯ ಪಕ್ಷಗಳ ’ಜನ ಮೈತ್ರಿಕೂಟ’ (ಪೀಪಲ್ಸ್ ಅಲೆಯನ್ಸ್)ದ ಅಧ್ಯಕ್ಷರನ್ನಾಗಿ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಆಯ್ಕೆ ಮಾಡಲಾಗಿದೆ. ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಉಪಾಧ್ಯಕ್ಷರಾಗಿರುತ್ತಾರೆ. ಜಮ್ಮು- ಕಾಶ್ಮೀರದ ಧ್ವಜವನ್ನು ಮೈತ್ರಿಕೂಟದ ಧ್ವಜವಾಗಿ ಬಳಸಲು ನಿರ್ಧರಿಸಲಾಗಿದೆ.

ಮುಫ್ತಿಯವರ ಗುಪ್ಕಾರ್ ರಸ್ತೆ ನಿವಾಸದಲ್ಲಿ ನಡೆದ ಮೈತ್ರಿಕೂಟದ ಅಂಗ ಪಕ್ಷಗಳ ಸಭೆಯಲ್ಲಿ ಈ ಮಹತ್ವದ ನಿರ್ಧಾರಕ್ಕೆ ಬರಲಾಯಿತು. "ಇದು ರಾಷ್ಟ್ರವಿರೋಧಿ ಮೈತ್ರಿಕೂಟವಲ್ಲ; ಇದು ಬಿಜೆಪಿ ವಿರೋಧಿ ಮೈತ್ರಿಕೂಟ..., ಬಿಜೆಪಿ ದೇಶವನ್ನು ವಿಭಜಿಸಲು ಮುಂದಾಗಿದೆ. ನಮ್ಮ ಮುಖ್ಯವಾದ ಉದ್ದೇಶ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಜನರ ಹಕ್ಕುಗಳ ಪುನಃಸ್ಥಾಪನೆಯನ್ನು ಖಾತರಿಪಡಿಸುವುದು" ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು.

ಕಾಂಗ್ರೆಸ್ ಈ ಕೂಟದಿಂದ ಹೊರಗುಳಿದಿರುವುದನ್ನು ಹೊರತುಪಡಿಸಿದರೆ, ಪರಸ್ಪರ ಕಟ್ಟಾ ವಿರೋಧಿ ಪಕ್ಷಗಳು ಕೂಡಾ ಕೂಟದಲ್ಲಿ ಸೇರಿವೆ. ಮೈತ್ರಿಕೂಟದ ಎರಡೂ ಸಭೆಗಳಿಂದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿ.ಎ. ಮೀರ್ ಹೊರಗುಳಿದಿದ್ದಾರೆ. ಸಂವಿಧಾನದ 370ನೇ ವಿಧಿ ರದ್ದತಿ ಬಗ್ಗೆ ಕಾಂಗ್ರೆಸ್ ಪಕ್ಷ ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದಾಗ ಪಿಡಿಪಿ ಆ ಬಗ್ಗೆ ಒಂದು ಶಬ್ದವೂ ಮಾತನಾಡದ ಹಿನ್ನೆಲೆಯಲ್ಲಿ ಪಿಡಿಪಿ ಇರುವ ಕೂಟದಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ ಎನ್ನಲಾಗಿದೆ.

ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಪೀಪಲ್ಸ್ ಕಾನ್ಫರೆನ್ಸ್, ಅವಾಮಿ ನ್ಯಾಷನಲ್ ಕಾನ್ಫರೆನ್ಸ್, ಸಿಪಿಎಂ, ಸಿಪಿಐ ಮತ್ತು ಜೆ ಆ್ಯಂಡ್ ಕೆ ಪೀಪಲ್ಸ್ ಮೂವ್‌ಮೆಂಟ್ ಈ ಕೂಟದಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News