ಕಾರು ಕಳವು ಪ್ರಕರಣ: ವಿಚಾರಣೆಗೆ ಕರೆತಂದ ವ್ಯಕ್ತಿ ಠಾಣೆಯಲ್ಲಿ ಮೃತ್ಯು

Update: 2020-10-26 04:03 GMT

ಹೊಸದಿಲ್ಲಿ, ಅ.26: ವಾಹನ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸರು ವಿಚಾರಣೆಗೆ ಕರೆತಂದಿದ್ದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯ ಮೊದಲ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಲೋಧಿ ಕಾಲನಿ ಠಾಣೆಯಲ್ಲಿ ನಡೆದಿದೆ. ಮೃತರನ್ನು ಧರ್ಮವೀರ್ ಸಿಂಗ್ (52) ಎಂದು ಗುರುತಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದ್ದು, ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಮೊದಲ ಮಹಡಿಯಿಂದ ಬಿದ್ದು ಆರೋಪಿ ಮೃತಪಟ್ಟಿದ್ದಾನೆ ಎನ್ನುವುದು ಪೊಲೀಸರ ವಾದ.

ಲೋಧಿ ಕಾಲನಿಯಲ್ಲಿ ಗುರುವಾರ ಕಾರೊಂದು ಕಳ್ಳತನವಾಗಿದ್ದು, ಈ ಕಳ್ಳರು ಧರ್ಮವೀರ್ ಸಿಂಗ್‌ನ ಆಟೊದಲ್ಲಿ ಪ್ರಯಾಣಿಸಿದ್ದರು ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸಿಂಗ್‌ನನ್ನು ವಿಚಾರಣೆಗೆ ಕರೆ ತರಲಾಗಿತ್ತು.

ಸಿಂಗ್ ನೆಲಮಹಡಿಯಲ್ಲಿ ಪ್ರಜ್ಞಾಶೂನ್ಯನಾಗಿ ಬಿದ್ದುದನ್ನು ಕಂಡ ತಕ್ಷಣ ಪೊಲೀಸರು ಧಾವಿಸಿ ಆಸ್ಪತ್ರೆಗೆ ಕರೆದೊಯ್ದರು. ಚಿಕಿತ್ಸೆ ವೇಳೆ ಆತ ಮೃತಪಟ್ಟಿದ್ದಾಗಿ ಪೊಲೀಸರು ಹೇಳಿದ್ದಾರೆ. ಕಾರು ಕಳವು ಆರೋಪಿಗಳನ್ನು ಶನಿವಾರ ಬಂಧಿಸಲಾಗಿತ್ತು.

"ಲೋಧಿ ಕಾಲನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಕಾರು ಕಳ್ಳತನದ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ದೃಶ್ಯಾವಳಿ ನೋಡಿದಾಗ ಆಟೊದಲ್ಲಿ ಬಂದ ಇಬ್ಬರು ಕಾರು ಕದ್ದು  ಪರಾರಿಯಾಗಿರುವುದು ಕಂಡುಬಂತು. ನಮ್ಮ ತಂಡ ಆಟೊ ಮಾಲಕರನ್ನು ಪತ್ತೆ ಮಾಡಿದ್ದು, ಮಾಲಕನ ತಂದೆ ಧರ್ಮವೀರ್ ಸಿಂಗ್ ಈ ಆಟೊವನ್ನು ಫತೇಪುರ್ ಬೇರಿ ನಿವಾಸಿ ಸತೀಶ್ ಎಂಬಾತನಿಗೆ ಬಾಡಿಗೆಗೆ ನೀಡಿದ್ದರು. ಧರ್ಮವೀರ್ ಅವರನ್ನು ಶುಕ್ರವಾರ ವಿಚಾರಣೆಗೆ ಗುರಿಪಡಿಸಿ ಶನಿವಾರ ಸತೀಶ್‌ನನ್ನು ಸೆರೆ ಹಿಡಿಯಲಾಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡ ಇಬ್ಬರು ಶಂಕಿತರಲ್ಲಿ ಆತ ಒಬ್ಬ. ಆತ ನೀಡಿದ ಮಾಹಿತಿ ಮೇರೆಗೆ ಘೇವಾರ್ ರಾಮ್ ಚೌಧರಿ ಎಂಬ ಆತನ ಸಹಚರನನ್ನೂ ಬಂಧಿಸಲಾಗಿದೆ" ಎಂದು ದಕ್ಷಿಣ ವಲಯದ ಡಿಸಿಪಿ ಅತುಲ್ ಠಾಕೂರ್ ಮಾಹಿತಿ ನೀಡಿದ್ದಾರೆ.

ತನಿಖೆ ನಡೆಸುತ್ತಿರುವ ಎಎಸ್‌ಐ ಧರ್ಮವೀರ್ ಅವರನ್ನು ವಿಚಾರಣೆಗೆ ಕರೆಸಿದ್ದರು. ಶನಿವಾರ ಲೋಧಿ ಕಾಲನಿ ಠಾಣೆಯ ಮೊದಲ ಮಹಡಿಯಲ್ಲಿ ಧರ್ಮವೀರ್‌ನನ್ನು ಎಎಸ್‌ಐ ವಿಜಯ್ ಪ್ರಶ್ನಿಸುತ್ತಿದ್ದರು. 2:45ರ ವೇಳೆಗೆ ವಿಜಯ್ ಶೌಚಾಲಯಕ್ಕೆ ತೆರಳಿದ್ದರು. ಅವರು ವಾಪಸ್ಸಾದಾಗ ಧರ್ಮವೀರ್ ಕೊಠಡಿಯಲ್ಲಿ ಇರಲಿಲ್ಲ. ಕಿಟಕಿಯಿಂದ ನೋಡಿದಾಗ ಠಾಣೆಯ ಮೊದಲ ಮಹಡಿಯಲ್ಲಿ ಬಿದ್ದುದು ಕಂಡುಬಂತು. ತಕ್ಷಣ ಏಮ್ಸ್‌ಗೆ ದಾಖಲಿಸಿದರೂ, ಚಿಕಿತ್ಸೆ ವೇಳೆ ಆತ ಮೃತಪಟ್ಟಿದ್ದಾಗಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News