ಕೃಷಿ ಕಾಯಿದೆ ವಿರೋಧಿಸಿ ಪಂಜಾಬ್ ಬಿಜೆಪಿ ಕೃಷಿ ಮೋರ್ಚಾ ಉಸ್ತುವಾರಿ ರಾಜೀನಾಮೆ

Update: 2020-10-26 08:02 GMT

ಅಮೃತಸರ್ : ಕೇಂದ್ರ ಸರಕಾರದ ಮೂರು ವಿವಾದಾತ್ಮಕ ಕೃಷಿ ಕಾಯಿದೆಗಳ ವಿರುದ್ಧ ರೈತರು ತಮ್ಮ ನಿವಾಸದೆದುರು ಪ್ರತಿಭಟಿಸಿದ ಎರಡು ವಾರ ತರುವಾಯ ಪಂಜಾಬ್ ರಾಜ್ಯದ ಬಿಜೆಪಿ ಕಿಸಾನ್ ಮೋರ್ಚಾ ಉಸ್ತುವಾರಿ ತರ್ಲೋಚನ್ ಸಿಂಗ್ ಗಿಲ್ ತಮ್ಮ ಹುದ್ದೆ ಹಾಗೂ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಮೋಗಾ ಪಟ್ಟಣದಲ್ಲಿನ ತಮ್ಮ ನಿವಾಸದೆದುರು ಪ್ರತಿಭಟಿಸುತ್ತಿರುವ ರೈತರನ್ನುದ್ದೇಶಿಸಿ ಮಾತನಾಡುವ ವೇಳೆ ಅವರು ತಮ್ಮ ರಾಜೀನಾಮೆ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ತಮ್ಮ ಪ್ರತಿಭಟನೆಯನ್ನು ನಿಲ್ಲಿಸಿದ್ದಾರೆ.

ತಮ್ಮ ರಾಜೀನಾಮೆ ನಿರ್ಧಾರವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮ ಅವರಿಗೆ ತಿಳಿಸಿದ್ದಾಗಿ ಹೇಳಿದ ಗಿಲ್, ಬಿಜೆಪಿ ಜತೆಗಿರಲು ತಮ್ಮ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದರು.

"ಕಳೆದ 30 ವರ್ಷಗಳಿಗೂ ಅಧಿಕ ಸಮಯ ನಾನು ಪಕ್ಷಕ್ಕಾಗಿ ದುಡಿದಿದ್ದೇನೆ ಹಾಗೂ ಪಕ್ಷವನ್ನು ನನ್ನ ಕುಟುಂಬವೆಂದು ಪರಿಗಣಿಸಿದ್ದೇನೆ. ಆದರೆ ನಾನು ಮೊದಲು ಒಬ್ಬ ರೈತ. ನನಗೂ ಕೃಷಿಭೂಮಿಯಿದ್ದು ನನಗೂ ತನ್ನ ಕುಟುಂಬಕ್ಕೆ ಅಗತ್ಯವಿರುವಷ್ಟು ಆದಾಯ ಗಳಿಸಲು ಸಾಧ್ಯವಾಗದ ರೈತನ ನೋವು ಅರ್ಥವಾಗುತ್ತದೆ. ಎರಡು ವಾರಗಳಿಂದ ಈ ಹಿರಿಯ ಕಿರಿಯ ರೈತರು ನನ್ನ ಮನೆಯೆದುರು ಪ್ರತಿಭಟಿಸಿದ್ದಾರೆ. ಈ ರೈತರು ನನ್ನ ಎದೆಯ ಮೇಲೆಯೇ ಕುಳಿತಂತೆ ಭಾಸವಾಗುತ್ತಿತ್ತು. ನಾನು ಇನ್ನೂ ಬಿಜೆಪಿಯ್ಲಲಿಯೇ ಮುಂದುವರಿದಿದ್ದರೆ ನನ್ನ ಆತ್ಮಸಾಕ್ಷಿ ನನ್ನನ್ನು ಅಪಹಾಸ್ಯ ಮಾಡುತ್ತಿತ್ತು. ಇದೇ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ,'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News