ಜವಾಬ್ದಾರಿಯುತವಾಗಿ ವರ್ತಿಸಿ: ರಿಪಬ್ಲಿಕ್ ಟಿವಿಗೆ ಎಡಿಟರ್ಸ್ ಗಿಲ್ಡ್ ಸಲಹೆ

Update: 2020-10-26 09:24 GMT

ಮುಂಬೈ: ಟಿಆರ್ ಪಿ ತಿರುಚಿದ ಆರೋಪದ ಕುರಿತಂತೆ ಮುಂಬೈ ಪೊಲೀಸರಿಂದ ತನಿಖೆ ಎದುರಿಸುತ್ತಿರುವ ರಿಪಬ್ಲಿಕ್ ಟಿವಿಗೆ "ಜವಾಬ್ದಾರಿಯುತವಾಗಿ ವರ್ತಿಸುವಂತೆ ಹಾಗೂ ತನ್ನ ಪತ್ರಕರ್ತರ ಸುರಕ್ಷತೆ ಕುರಿತಂತೆ ಯಾವುದೇ ರಾಜಿ ಮಾಡಿಕೊಳ್ಳದಂತೆ'' ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸಲಹೆ ನೀಡಿದೆ. ಮುಂಬೈ ಪೊಲೀಸರು  ರಿಪಬ್ಲಿಕ್ ಟಿವಿ ಪತ್ರಕರ್ತರ ವಿರುದ್ಧ ಎಫ್‍ಐಆರ್ ದಾಖಲಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಪೊಲೀಸ್ ತನಿಖೆಯ ಮೇಲೆ ಪ್ರಭಾವ ಬೀರಲು ತಾನು ಬಯಸುವುದಿಲ್ಲ, ಆದರೆ ಪತ್ರಕರ್ತರನ್ನು ಬಲಿಪಶು ಮಾಡುವುದು ತಕ್ಷಣ ನಿಲ್ಲಬೇಕು ಎಂದು ಗಿಲ್ಡ್ ಹೇಳಿದೆ. "ಸರಕಾರ ತನ್ನ ನಿರಂಕುಶ ಅಧಿಕಾರವನ್ನು ಬಳಸುವುದು ಯಾವತ್ತೂ ಪತ್ರಕರ್ತರ ಹಿತಾಸಕ್ತಿಯಲ್ಲಿರುವುದಿಲ್ಲ,'' ಎಂದು 'ದಿ ಎಡಿಟರ್ಸ್ ಗಿಲ್ಡ್' ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ತನ್ನ ಪತ್ರಕರ್ತರ ಸುರಕ್ಷತೆಯನ್ನು ರಾಜಿ ಮಾಡಿಕೊಳ್ಳದೇ ಇರುವುದರ ಜತೆಗೆ ಮಾಧ್ಯಮದ ವಿಶ್ವಾಸಾರ್ಹತೆಗೂ ಧಕ್ಕೆ ತರಬಾರದು ಎಂದು ಎಡಿಟರ್ಸ್ ಗಿಲ್ಡ್ ರಿಪಬ್ಲಿಕ್ ಟಿವಿಗೆ ಹೇಳಿದೆ.  ತನಿಖೆಯು ಮಾಧ್ಯಮ ಹಕ್ಕುಗಳ ದಮನಕ್ಕೆ ಒಂದು ಅಸ್ತ್ರವಾಗದಂತೆ ಪೊಲೀಸರು ನೋಡಿಕೊಳ್ಳಬೇಕೆಂದೂ ಗಿಲ್ಡ್ ಹೇಳಿದೆ.

"ವಾಕ್ ಸ್ವಾತಂತ್ರ್ಯವೆಂದರೆ ದ್ವೇಷಯುಕ್ತ ಹೇಳಿಕೆ ನೀಡಲು ಲೈಸನ್ಸ್ ಎಂದು ತಿಳಿಯಬಾರದು,'' ಎಂದೂ ಎಡಿಟರ್ಸ್ ಗಿಲ್ಡ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News