ಕಾರ್ಟೂನ್ ವಿವಾದ: ತನ್ನ ಉತ್ಪನ್ನಗಳ ಬಹಿಷ್ಕಾರದಿಂದ ಹಿಂದೆ ಸರಿಯುವಂತೆ ಅರಬ್ ರಾಷ್ಟ್ರಗಳಿಗೆ ಫ್ರಾನ್ಸ್ ಒತ್ತಾಯ

Update: 2020-10-26 13:28 GMT
Photo: twitter

ಪ್ಯಾರಿಸ್ : ಪ್ರವಾದಿ ಮುಹಮ್ಮದ್ ಅವರ ಕುರಿತಾದ ವ್ಯಂಗ್ಯಚಿತ್ರಗಳನ್ನು ತೋರಿಸುವ ಹಕ್ಕನ್ನು ಸಮರ್ಥಿಸಿ ಪ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರೋನ್ ಅವರು ನೀಡಿದ ಹೇಳಿಕೆಯನ್ನು ವಿರೋಧಿಸಿ ಫ್ರಾನ್ಸ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ನೀಡಲಾದ ಕರೆಗಳನ್ನು ಅಂತ್ಯಗೊಳಿಸುವಂತೆ ಮಧ್ಯ ಪೂರ್ವ ದೇಶಗಳಿಗೆ ಫ್ರಾನ್ಸ್ ಆಗ್ರಹಿಸಿದೆ.

"ಫ್ರಾನ್ಸ್ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂಬ ಕೆಲ ಅಲ್ಪಸಂಖ್ಯಾತ ತೀವ್ರಗಾಮಿಗಳು ಆಧಾರರಹಿತ ಕರೆ ನೀಡಿದ್ದಾರೆ,'' ಎಂದು ಫ್ರಾನ್ಸ್ ದೇಶದ ವಿದೇಶಾಂಗ ಸಚಿವಾಲಯ ಹೇಳಿದೆ.

ಮ್ಯಾಕ್ರೋನ್ ಹೇಳಿಕೆಯಿಂದ ಭುಗಿಲೆದ್ದಿರುವ ಅಸಮಾಧಾನದ ಹಿನ್ನೆಲೆಯಲ್ಲಿ ಫ್ರಾನ್ಸ್ ಉತ್ಪನ್ನಗಳನ್ನು ಕುವೈತ್, ಜೋರ್ಡಾನ್ ಹಾಗೂ ಕತರ್ ನ ಹಲವು ಮಳಿಗೆಗಳಿಂದ ತೆಗೆದು ಹಾಕಲಾಗಿದೆ. ಲಿಬಿಯಾ, ಸಿರಿಯಾ ಹಾಗೂ ಗಾಝಾ ಪಟ್ಟಿಯಲ್ಲೂ  ಮ್ಯಾಕ್ರೋನ್ ಹೇಳಿಕೆಗೆ ವಿರೋಧ ವ್ಯಕ್ತವಾಗಿವೆ.

ಮ್ಯಾಕ್ರೋನ್ ಅವರು ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುತ್ತಿಲ್ಲ ಹಾಗೂ ಫ್ರಾನ್ಸ್ ದೇಶದ ಮಿಲಿಯಗಟ್ಟಲೆ ಮುಸ್ಲಿಮರನ್ನು ಅವಗಣಿಸುತ್ತಿದ್ದಾರೆ ಎಂದು  ಟರ್ಕಿ ಮತ್ತು ಪಾಕಿಸ್ತಾನದ ರಾಜಕೀಯ ನಾಯಕರೂ ಆರೋಪಿಸಿದ್ದಾರೆ.

ಸೌದಿ ಅರೇಬಿಯಾದಲ್ಲೂ ಫ್ರೆಂಚ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಆನ್ಲೈನ್ ಕರೆಗಳನ್ನು ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News