ಉತ್ತರಪ್ರದೇಶ ಗೋಹತ್ಯೆ ನಿಷೇಧ ಕಾಯ್ದೆಯ ದುರ್ಬಳಕೆ: ಅಲಹಾಬಾದ್ ಹೈಕೋರ್ಟ್ ಕಳವಳ

Update: 2020-10-26 18:36 GMT

ಲಕ್ನೋ, ಅ. 26: ಉತ್ತರಪ್ರದೇಶ ಗೋಹತ್ಯೆ ನಿಷೇಧ ಕಾಯ್ದೆ ಪದೇ ಪದೇ ದುರ್ಬಳಕೆಯಾಗುತ್ತಿರುವ ಬಗ್ಗೆ ಅಲಹಾಬಾದ್ ಉಚ್ಚ ನ್ಯಾಯಾಲಯ ಸೋಮವಾರ ಕಳವಳ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಅಮಾಯಕರನ್ನು ಸಿಲುಕಿಸಲು ಈ ಕಾಯ್ದೆಯನ್ನು ಬಳಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ಹಲವಾರು ಪ್ರಕರಣಗಳಲ್ಲಿ ಅಧಿಕಾರಿಗಳು ಪತ್ತೆ ಮಾಡಿದ ಮಾಂಸವನ್ನು ಯಾವುದೇ ರೀತಿಯ ವಿಶ್ಲೇಷಿಸದೆ ಅಥವಾ ದೃಢೀಕರಿಸದೆ ಗೋಮಾಂಸ ಎಂದು ಭಾವಿಸಲಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಈ ಕಾಯ್ದೆ ಅಡಿ ಗೋಹತ್ಯೆ ಹಾಗೂ ಗೋಮಾಂಸ ಮಾರಾಟ ಮಾಡಿದ ಆರೋಪಿಯಾಗಿರುವ ರಹಮುದ್ದೀನ್ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ಸಂದರ್ಭ ನ್ಯಾಯಮೂರ್ತಿ ಸಿದ್ಧಾರ್ಥ ಅವರಿದ್ದ ಏಕ ಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ರಹಮುದ್ದೀನ್ ಆಗಸ್ಟ್ 5ರಿಂದ ಕಾರಾಗೃಹದಲ್ಲಿ ಇದ್ದರು. ಪೊಲೀಸರ ಪ್ರಥಮ ಮಾಹಿತಿ ವರದಿಯಲ್ಲಿ ಆತನ ವಿರುದ್ಧ ಯಾವುದೇ ರೀತಿಯ ನಿರ್ದಿಷ್ಟ ಆರೋಪ ಇಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಗೋಹತ್ಯೆ ನಡೆದ ಸ್ಥಳದಲ್ಲಿ ರಹಮುದ್ದೀನ್ ಅವರು ಇರಲಿಲ್ಲ ಎಂದು ಕೂಡ ಮನವಿ ಹೇಳಿತು. ಕಾಯ್ದೆಯನ್ನು ಅಮಾಯಕ ವ್ಯಕ್ತಿಗಳ ವಿರುದ್ಧ ದುರ್ಬಳಕೆ ಮಾಡಲಾಗುತ್ತಿದೆ ಎಂದು ಪ್ರತಿಪಾದಿಸಿದ ಉಚ್ಚ ನ್ಯಾಯಾಲಯ ರಹಮುದ್ದೀನ್‌ಗೆ ಜಾಮೀನು ಮಂಜೂರು ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News