ಭಾರತ-ಅಮೆರಿಕಾ ರಕ್ಷಣಾ ಸಚಿವರು ಸಹಿ ಹಾಕಲಿರುವ ಮಹತ್ವದ ರಕ್ಷಣಾ ಒಪ್ಪಂದ BECA ಬಗ್ಗೆ ಇಲ್ಲಿದೆ ಮಾಹಿತಿ

Update: 2020-10-27 10:48 GMT

ಹೊಸದಿಲ್ಲಿ: ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಇಂದು ಸಹಿ ಹಾಕಲಿರುವ ಹಲವು ಮಹತ್ವದ ರಕ್ಷಣಾ ಒಪ್ಪಂದಗಳಲ್ಲಿ ಪ್ರಮುಖವಾದ BECA ಕೂಡ ಸೇರಿದೆ. ಬಿಇಸಿಎ ಅಂದರೆ ಬೇಸಿಕ್ ಎಕ್ಸ್‍ಚೇಂಜ್ ಎಂಡ್ ಕೊ-ಆಪರೇಶನ್ ಅಗ್ರೀಮೆಂಟ್ ಆಗಿದೆ. ಇದರ ಭಾಗವಾಗಿ ಅಮೆರಿಕಾದ ಮಿಲಿಟರಿ ಉಪಗ್ರಹಗಳ ಮುಖಾಂತರ ಭಾರತಕ್ಕೆ ಅತ್ಯಂತ ನಿಖರ ಮಾಹಿತಿ ಹಾಗೂ ಸ್ಥಳಗಳ ಚಿತ್ರಗಳು ನೈಜ ಸಮಯ ಆಧಾರದಲ್ಲಿ (ರಿಯಲ್ ಟೈಮ್ ಬೇಸಿಸ್) ಲಭ್ಯವಾಗಲಿವೆ.

ಈ ಬಿಇಸಿಎ ಭಾರತಕ್ಕೆ ಗೌಪ್ಯ ಭೌಗೋಳಿಕ-ಬಾಹ್ಯಾಕಾಶ ಕುರಿತಾದ ದತ್ತಾಂಶ ಹಾಗೂ ಮಿಲಿಟರಿಗೆ ಮಹತ್ವವಾಗಿರುವ ಇತರ ಮಾಹಿತಿಗಳನ್ನು ಒದಗಿಸಲಿದೆ. ಈ ಒಪ್ಪಂದದ ಅನುಸಾರ ಎರಡೂ ದೇಶಗಳು ತಮ್ಮ ಭೂಪಟ, ನಾಟಿಕಲ್ ಮತ್ತು ಏರೋನಾಟಿಕಲ್ ಚಾರ್ಟ್‍ಗಳು ವಾಣಿಜ್ಯ ಮತ್ತಿತರ ಚಿತ್ರಗಳು ಹಾಗೂ ಇತರ ಕೆಲವೊಂದು ಗೌಪ್ಯವಲ್ಲದೆ ದತ್ತಾಂಶಗಳನ್ನೂ ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಭಾರತಕ್ಕೆ ತನ್ನ ಮಿಲಿಟರಿ ಗುರಿಗಳನ್ನು ನಿಖರವಾಗಿ ತಲುಪಲು ಅನುವಾಗುವಂತಹ ಅತ್ಯಂತ ಸೂಕ್ಷ್ಮ ಉಪಗ್ರಹ ಮತ್ತು ಸೆನ್ಸಾರ್ ದತ್ತಾಂಶಗಳನ್ನೂ ಈ ಒಪ್ಪಂದದನ್ವಯ ಅಮೆರಿಕಾ ಭಾರತದೊಂದಿಗೆ ಹಂಚಲಿದೆ.

ಇದರಿಂದಾಗಿ ಭಾರತವು ಹಿಂದೂ ಮಹಾಸಾಗರದಲ್ಲಿ ಚೀನೀ ಯುದ್ಧನೌಕೆಗಳ ಚಲನವಲನಗಳ ಮೇಲೆ ನಿಗಾ ಇಡಬಹುದಾಗಿದೆ.

ಬಾಲಾಕೋಟ್ ದಾಳಿಯಂತಹುದೇ ಇನ್ನೊಂದು ದಾಳಿ ನಡೆದಿದ್ದೇ ಆದಲ್ಲಿ ತನ್ನ ಗುರಿ ನಿಖರವಾಗಿದೆಯೇ ಎಂದು ತಿಳಿಯಲು ಅಮೆರಿಕಾದಿಂದ ದೊರೆಯುವ ಉಪಗ್ರಹ ಚಿತ್ರ ಮತ್ತಿತರ ಮಾಹಿತಿಗಳಿಂದ ಭಾರತಕ್ಕೆ ಗೊತ್ತಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News