ಹಾಲಿ ವಿತ್ತ ವರ್ಷದಲ್ಲಿ ಜಿಡಿಪಿ ಪ್ರಗತಿ ಶೂನ್ಯಕ್ಕೆ ಸಮೀಪವಿರಲಿದೆ: ವಿತ್ತ ಸಚಿವೆ

Update: 2020-10-27 17:45 GMT

ಹೊಸದಿಲ್ಲಿ,ಅ.27: ಆರ್ಥಿಕತೆಯಲ್ಲಿ ಪುನಃಶ್ಚೇತನದ ಸ್ಪಷ್ಟ ಲಕ್ಷಣಗಳು ಗೋಚರವಾಗುತ್ತಿದ್ದರೂ ಹಾಲಿ ವಿತ್ತ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು ಋಣಾತ್ಮಕ ವಲಯದಲ್ಲಿರಬಹುದು ಅಥವಾ ಶೂನ್ಯಕ್ಕೆ ಸಮೀಪವಾಗಿರಬಹುದು ಎಂದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಇಲ್ಲಿ ಹೇಳಿದರು. ವಿತ್ತ ವರ್ಷದ ಮೊದಲ ತ್ರೈಮಾಸಿಕ (ಎಪ್ರಿಲ್-ಜೂನ್)ದಲ್ಲಿ ಆರ್ಥಿಕತೆಯು ಶೇ.23.9ರಷ್ಟು ಭಾರೀ ಪ್ರಮಾಣದಲ್ಲಿ ಸಂಕುಚಿತಗೊಂಡಿದ್ದು ಇದಕ್ಕೆ ಮುಖ್ಯ ಕಾರಣವಾಗಿದೆ ಎಂದರು.

  ಸೆರಾ ವೀಕ್‌ನ ಇಂಡಿಯಾ ಎನರ್ಜಿ ಫೋರಮ್‌ನಲ್ಲಿ ಮಾತನಾಡುತ್ತಿದ್ದ ಅವರು,ಜೀವನೋಪಾಯಕ್ಕಿಂತ ಜೀವಗಳು ಮುಖ್ಯ ಎಂದು ಭಾವಿಸಿದ್ದ ಸರಕಾರವು ಮಾ.25ರಿಂದ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಿತ್ತು ಮತ್ತು ಸಾಂಕ್ರಾಮಿಕವನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲು ಈ ಲಾಕ್ ಡೌನ್ ಸಮಯಾವಕಾಶವನ್ನು ಒದಗಿಸಿತ್ತು. ಅನ್‌ಲಾಕ್‌ನೊಂದಿಗೆ ಆರ್ಥಿಕ ಸೂಚಕಗಳು ಆರ್ಥಿಕ ಪುನಃಶ್ಚೇತನದ ಲಕ್ಷಣಗಳನ್ನು ತೋರಿಸುತ್ತಿವೆ. ಒಟ್ಟಾರೆಯಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು ಋಣಾತ್ಮಕ ವಲಯದಲ್ಲಿ ಅಥವಾ ಶೂನ್ಯಕ್ಕೆ ಸಮೀಪವಿರಲಿದೆ. ಮುಂದಿನ ವಿತ್ತವರ್ಷದಿಂದ ಜಿಡಿಪಿ ಪ್ರಗತಿಯು ಚೇತರಿಕೆಯನ್ನು ಕಾಣಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News