ಅಕ್ರಮ ಚಿನ್ನ ಸಾಗಾಟ ಪ್ರಕರಣ : ಐಎಎಸ್ ಅಧಿಕಾರಿ ಶಿವಶಂಕರ್ ಈಡಿ ವಶಕ್ಕೆ

Update: 2020-10-28 09:26 GMT

ತಿರುವನಂತಪುರ : ದೇಶಾದ್ಯಂತ ಸುದ್ದಿ ಮಾಡಿರುವ ಕೇರಳದ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ  ಐಎಎಸ್ ಅಧಿಕಾರಿ ಎಂ. ಶಿವಶಂಕರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

 ಸದ್ಯ ಸೇವೆಯಿಂದ ಅಮಾನತುಗೊಂಡಿರುವ ಶಿವಶಂಕರ್ ಅವರನ್ನು ಅವರು ಬೆನ್ನು ನೋವಿನ ಚಿಕಿತ್ಸೆಗೆಂದು ದಾಖಲಾಗಿದ್ದ ನಗರದ ವಂಚಿಯೂರ್ ಎಂಬಲ್ಲಿರುವ ಆಯುರ್ವೇದ ಆಸ್ಪತ್ರೆಯಿಂದ   ಈಡಿ ಅಧಿಕಾರಿಗಳು  ವಶಕ್ಕೆ ಪಡೆದುಕೊಂಡಿದ್ದಾರೆ.

ಶಿವಶಂಕರ್ ಅವರನ್ನು ಅಕ್ಟೋಬರ್ 28ರ ತನಕ ಬಂಧಿಸದಂತೆ ಈ ಹಿಂದೆ ನಿರ್ದೇಶನಾಲಯಕ್ಕೆ ತಿಳಿಸಿದ್ದ ಹೈಕೋರ್ಟ್ ಬುಧವಾರ  ಅವರ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿದೆ. ಇದಾದ ಕೆಲವೇ ನಿಮಿಷಗಳಲ್ಲಿ ರಾಜಧಾನಿಯಲ್ಲಿಯೇ ಠಿಕಾಣಿ ಹೂಡಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶಿವಶಂಕರ್  ಅವರಿಗೆ ಸಮನ್ಸ್ ನೀಡಿ ಅವರನ್ನು ವಶಕ್ಕೆ ಪಡೆದುಕೊಂಡರು. ಅವರನ್ನು ಹೆಚ್ಚಿನ ವಿಚಾರಣೆಗಾಗಿ ಕೊಚ್ಚಿಗೆ ಕರೆದೊಯ್ಯಲಾಗುವುದು ಎಂಬ ಮಾಹಿತಿಯಿದೆ.

ಈ ಹಿಂದೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸಮನ್ಸ್ ಜಾರಿಗೊಳಿಸಿದಾಗ ಅನಾರೋಗ್ಯದ ನೆಪವೊಡ್ಡಿ ಖಾಸಗಿ ಆಸ್ಪತ್ರೆಗೆ ಶಿವಶಂಕರ್ ದಾಖಲಾಗಿದ್ದರು. ಆದರೆ ಅವರ ವೈದ್ಯಕೀಯ ತಪಾಸಣೆ ನಂತರ ಅವರಿಗೆ ಬೆನ್ನು ನೋವು ಹೊರತುಪಡಿಸಿ ಇತರ ಯಾವುದೇ ತೀವ್ರ ಆರೋಗ್ಯ ಸಮಸ್ಯೆಯಿಲ್ಲ ಎಂದು ತಿಳಿದು ಬಂದಿತ್ತು. ಈ ಕಸ್ಟಮ್ಸ್ ಪ್ರಕರಣದಲ್ಲಿ ಅವರಿಗೆ ಹೈಕೋರ್ಟ್ ಜಾಮೀನು ನೀಡುತ್ತಿದ್ದಂತೆಯೇ ಅವರು ಆಯುರ್ವೇದ ಆಸ್ಪತ್ರೆಗೆ ದಾಖಲಾಗಿ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News