ಮಹಿಳೆಯ ಮನೆ ಬಾಗಿಲಲ್ಲಿ ಮೂತ್ರ ವಿಸರ್ಜಿಸಿದ್ದ ಎಬಿವಿಪಿ ನಾಯಕ ಮಧುರೈ ಏಮ್ಸ್ ಮಂಡಳಿಗೆ ನೇಮಕ!

Update: 2020-10-28 11:15 GMT

ಚೆನ್ನೈ : ಕೆಲ ಸಮಯದ ಹಿಂದೆ ನಗರದ ಹಿರಿಯ ಮಹಿಳೆಯೊಬ್ಬರ ನಿವಾಸದೆದುರು ತ್ಯಾಜ್ಯ ಎಸೆದಿರುವುದಲ್ಲದೆ ಆಕೆಯ ಮನೆ ಬಾಗಿಲಿನ ಎದುರು ಮೂತ್ರ ವಿಸರ್ಜಿಸಿ ಸುದ್ದಿಯಲ್ಲಿದ್ದ ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷ  ಹಾಗೂ ಕಿಲ್ಪಾಕ್ ಮೆಡಿಕಲ್ ಕಾಲೇಜಿನ  ಸರ್ಜಿಕಲ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಷಣ್ಮುಗಂ ಸುಬ್ಬಯ್ಯ ಅವರನ್ನು ಮಧುರೈ ಸಮೀಪ ಆರಂಭವಾಗಲಿರುವ  ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ ಸಂಸ್ಥೆಯ(ಏಮ್ಸ್) ಆಡಳಿತ ಮಂಡಳಿ ಸದಸ್ಯರನ್ನಾಗಿ  ಕೇಂದ್ರ ಸರಕಾರ ನೇಮಕ ಮಾಡಿರುವುದು ಹಲವರ ಹುಬ್ಬೇರಿಸಿದೆ.

ಷಣ್ಮುಗಂ ವಿರುದ್ಧ ಸಂತ್ರಸ್ತ ಮಹಿಳೆಯ ಸೋದರಳಿಯ ದೂರು ದಾಖಲಿಸಿದ್ದರೂ ಅದನ್ನು ವಾಪಸ್ ಪಡೆಯಲಾಗಿದೆ, ಆದರೆ ಬಹಳಷ್ಟು ಒತ್ತಡದ ಹಿನ್ನೆಲೆಯಲ್ಲಿ ದೂರು ವಾಪಸ್ ಪಡೆಯಲಾಗಿತ್ತೆಂದು  ಸಂತ್ರಸೆಯ ಕುಟುಂಬ ತಿಳಿಸಿದೆ. ಅಪಾರ್ಟ್ ಮೆಂಟ್ ಕಟ್ಟಡದ ಖಾಲಿ ಪಾರ್ಕಿಂಗ್ ಸ್ಥಳವನ್ನು ಬಳಕೆ ಮಾಡುವ ವಿಚಾರದಲ್ಲಿ ಉಂಟಾದ ಜಗಳ ಈ ಘಟನೆಗೆ ಕಾರಣವೆನ್ನಲಾಗಿದೆ ಆದರೆ  ಷಣ್ಮುಗಂ ತಮ್ಮ ಮೇಲಿನ ಆರೋಪ ನಿರಾಕರಿಸಿದ್ದು ಘಟನೆಯ ವೀಡಿಯೋ ದಾಖಲೆಗಳಿದ್ದರೂ ಅವುಗಳನ್ನು ತಿರುಚಲಾಗಿದೆ ಎಂದು ಈಗಾಗಲೇ ಹೇಳಿದ್ದಾರೆ.

ಅದೇನೇ ಇರಲಿ ಇಂತಹ ಹಿನ್ನೆಲೆಯುಳ್ಳ ವ್ಯಕ್ತಿಯೊಬ್ಬರನ್ನು ಮಧುರೈ ಏಮ್ಸ್ ಮಂಡಳಿಗೆ ಏಕೆ ಸರಕಾರ ನೇಮಿಸಿದೆ ಎಂದು ವಿಸಿಕೆ ನಾಯಕ ಹಾಗೂ  ಸಂಸದ ಡಿ, ರವಿಕುಮಾರ್. ತಮಿಳುನಾಡಿನ ವಿರುಧ್‍ನಗರದ ಕಾಂಗ್ರೆಸ್ ಸಂಸದ, ಡಿಎಂಕೆ ಸಂಸದೆ ಕನ್ನಿಮೋಝಿ, ಸಹಿತ ಹಲವರು ತಮ್ಮ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಮಧುರೈ ಏಮ್ಸ್ ಸಂಸ್ಥೆಗೆ ಸರಕಾರ ಪುದುಚ್ಚೇರಿ ಜೆಐಪಿಎಂಇಆರ್  ಅಧ್ಯಕ್ಷ ಡಾ ವಿ. ಎಂ. ಕಟೋಚ್ ಅವರನ್ನು ಅಧ್ಯಕ್ಷರನ್ನಾಗಿಸಿದ್ದರೆ ಚೆನ್ನೈನ ಎಂಜಿಆರ್ ವೈದ್ಯಕೀಯ ವಿವಿಯ ಉಪಕುಲಪತಿ  ಡಾ ಸುಧಾ ಶೇಷಯ್ಯನ್ ಅವರನ್ನೂ ಆಡಳಿತ ಮಂಡಳಿ ಸದಸ್ಯೆಯನ್ನಾಗಿ ನೇಮಕಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News