ಆರೋಗ್ಯ ಸೇತು ಆ್ಯಪ್ ಕುರಿತು ಮಾಹಿತಿ ಇಲ್ಲ ಎಂದ ಅಧಿಕಾರಿಗಳು, ಇಲಾಖೆಗೆ ಕೇಂದ್ರ ಮಾಹಿತಿ ಆಯೋಗದ ನೋಟಿಸ್

Update: 2020-10-28 17:11 GMT

 ಹೊಸದಿಲ್ಲಿ, ಅ.28 : ಕೊರೋನ ಸೋಂಕಿನ ವಿರುದ್ಧದ ಹೋರಾಟದಲ್ಲಿ ಅಗತ್ಯದ ಸಾಧನ ಎಂದು ಸರಕಾರ ಘೋಷಿಸಿದ್ದ ಆರೋಗ್ಯಸೇತು ಆ್ಯಪ್ ಅನ್ನು ಕೋಟ್ಯಂತರ ಭಾರತೀಯರು ಅಳವಡಿಸಿಕೊಂಡಿದ್ದಾರೆ. ಆದರೆ ಇದನ್ನು ರೂಪಿಸಿದವರು ಯಾರು ಎಂಬ ಪ್ರಶ್ನೆಗೆ ಮಾಹಿತಿ ಹಕ್ಕು ಕಾಯ್ದೆಯಡಿಯ ಅರ್ಜಿಯಲ್ಲೂ ಉತ್ತರ ದೊರೆತಿಲ್ಲ ಎಂದು ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.

ಕೊರೋನ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚುವ ಉದ್ದೇಶದಿಂದ ಈ ಆ್ಯಪ್ ರೂಪಿಸಲಾಗಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಆ್ಯಪ್ ಅಭಿವೃದ್ಧಿಗೊಳಿಸಿದೆ ಎಂದು ಆರೋಗ್ಯಸೇತು ವೆಬ್‌ಸೈಟ್‌ನಲ್ಲಿ ನಮೂದಿಸಲಾಗಿದೆ. ಆದರೆ ಇದನ್ನು ರೂಪಿಸಿದವರು ಯಾರು ಎಂಬ ಪ್ರಶ್ನೆಗೆ ಎರಡೂ ಇಲಾಖೆಗಳು ಹಾರಿಕೆಯ ಉತ್ತರ ನೀಡಿವೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿದ್ದ ಸೌರವ್ ದಾಸ್ ಎಂಬವರು ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಆ್ಯಪ್ ರೂಪಿಸಲು ಯಾರು ಪ್ರಸ್ತಾವನೆ ಸಲ್ಲಿಸಿದ್ದರು, ಅದಕ್ಕೆ ಯಾವಾಗ ಅನುಮೋದನೆ ಲಭಿಸಿದೆ, ಇದರಲ್ಲಿ ಒಳಗೊಂಡಿರುವ ಸಂಸ್ಥೆಗಳು, ವ್ಯಕ್ತಿಗಳು ಅಥವಾ ಸರಕಾರದ ಇಲಾಖೆಯ ವಿವರ, ಆ್ಯಪ್ ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಖಾಸಗಿ ವ್ಯಕ್ತಿಗಳ ಮಧ್ಯೆ ನಡೆದಿರುವ ಸಂವಹನದ ವಿವರವನ್ನು ಒದಗಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಆದರೆ ಆ್ಯಪ್ ರೂಪಿಸುವ ಕುರಿತ ಫೈಲ್ ತಮ್ಮ ಬಳಿಯಿಲ್ಲ ಎಂದು ರಾಷ್ಟ್ರೀಯ ಮಾಹಿತಿ ಕೇಂದ್ರ ಉತ್ತರಿಸಿತ್ತು. ಮಾಹಿತಿ ತಂತ್ರಜ್ಞಾನ ಇಲಾಖೆ ಅರ್ಜಿಯನ್ನು ರಾಷ್ಟ್ರೀಯ ಇ-ಆಡಳಿತ ವಿಭಾಗಕ್ಕೆ ವರ್ಗಾಯಿಸಿತ್ತು. ಕೋರಿರುವ ಮಾಹಿತಿ ತಮ್ಮ ವಿಭಾಗಕ್ಕೆ ಸಂಬಂಧಿಸಿದ್ದಲ್ಲ ಎಂದು ಇ-ಆಡಳಿತ ವಿಭಾಗ ತಿಳಿಸಿತ್ತು. ಅಧಿಕಾರಿಗಳು ಮಾಹಿತಿ ನೀಡಲು ನಿರಾಕರಿಸುವಂತಿಲ್ಲ ಎಂದು ತಿಳಿಸಿರುವ ಮಾಹಿತಿ ಆಯೋಗ, ಹಾರಿಕೆಯ ಉತ್ತರ ನೀಡಿದ್ದಕ್ಕಾಗಿ ಯಾಕೆ ಸರಕಾರದ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಜೊತೆಗೆ, ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಹಾಗೂ ರಾಷ್ಟ್ರೀಯ ಇ-ಆಡಳಿತ ವಿಭಾಗಕ್ಕೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News