ನೂತನ ಭೂ ಸುಧಾರಣೆ ಕಾಯ್ದೆ ವಿರುದ್ಧ ಜಮ್ಮು ಕಾಶ್ಮೀರದಲ್ಲಿ ಪಿಡಿಪಿ, ಜೆಕೆಎನ್‌ಪಿಪಿಯಿಂದ ಪ್ರತಿಭಟನೆ

Update: 2020-10-28 14:49 GMT

ಶ್ರೀನಗರ, ಅ. 28: ಜಮ್ಮು ಹಾಗೂ ಕಾಶ್ಮೀರದಲ್ಲಿ ಹೊರ ರಾಜ್ಯದ ಜನರು ಜಮೀನು ಖರೀದಿಸಲು ಅನುವು ಮಾಡಿ ಕೊಡುವ ನೂತನ ಭೂ ಸುಧಾರಣಾ ಕಾಯ್ದೆಯನ್ನು ಹಿಂದೆ ತೆಗೆಯುವಂತೆ ಆಗ್ರಹಿಸಿ ಪಿಡಿಪಿ ಹಾಗೂ ಜೆಕೆಎನ್‌ಪಿಪಿ ಬುಧವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿವೆ.

ಪಿಡಿಪಿಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಸುರಿಂದರ್ ಚೌಧರಿ ನೇತೃತ್ವದಲ್ಲಿ ಪಿಡಿಪಿ ಕಾರ್ಯಕರ್ತರು ತ್ರಿವರ್ಣ ಧ್ವಜ ಹಾಗೂ ಪಕ್ಷದ ಧ್ವಜವನ್ನು ಹಿಡಿದುಕೊಂಡು ಗಾಂಧಿನಗರದಲ್ಲಿರುವ ಪಿಡಿಪಿಯ ಕೇಂದ್ರ ಕಚೇರಿಯ ಸಮೀಪ ಸೇರಿದರು. ಅನಂತರ ರ‍್ಯಾಲಿ ನಡೆಸಿದರು. ಮುಖ್ಯ ರಸ್ತೆಯಲ್ಲಿ ರ‍್ಯಾಲಿ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಅನಂತರ ಪ್ರತಿಭಟನಕಾರರು ಶಾಂತಿಯುತವಾಗಿ ಚದುರಿದರು. ‘‘ಬಿಜೆಪಿಯ ಜನ ವಿರೋಧಿ ನೀತಿ, ಮುಖ್ಯವಾಗಿ ನೂತನ ಭೂ ಸುಧಾರಣಾ ಕಾಯ್ದೆ ವಿರುದ್ಧ ನಮ್ಮ ಪ್ರತಿಭಟನೆ. ಈ ಭೂಮಿ ನಮ್ಮ ಮಂದಿನ ಜನಾಂಗಕ್ಕೆ ಸೇರಿದ್ದು. ಬಿಜೆಪಿ ಜಮ್ಮುವಿನ ಜನರನ್ನು ದಾರಿ ತಪ್ಪಿಸುತ್ತಿದೆ. ವಂಚಿಸುತ್ತಿದೆ. ನಾವು ಕೇಂದ್ರ ಸರಕಾರದ ಈ ನೀತಿಯನ್ನು ಸಹಿಸಲಾರೆವು. ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡಲಿದ್ದೇವೆ’’ ಎಂದು ಸುರಿಂದರ್ ಚೌಧರಿ ಹೇಳಿದ್ದಾರೆ.

ರಾಷ್ಟ್ರ ಧ್ವಜ ಹಿಡಿಯುವುದಿಲ್ಲ ಎಂದು ಮೆಹಬೂಬಾ ಮುಫ್ತಿ ಎಂದೂ ಹೇಳಿಲ್ಲ. ಜನವರಿ 26 ಹಾಗೂ ಆಗಸ್ಟ್ 15ರಂದು ಸಂಭ್ರಮದಿಂದ ತ್ರಿವರ್ಣ ಧ್ವಜ ಆರೋಹಣ ಮಾಡುವ ವಿಷಯದ ಕುರಿತು ಅವರು ಹೇಳಿದ್ದಲ್ಲ. ಬಿಜೆಪಿಯ ಕೇಂದ್ರ ಕಚೇರಿಗೆ ಭೇಟಿ ನೀಡಿ. ಅಲ್ಲಿ ನೀವು ವರ್ಷ ಪೂರ್ತಿ ರಾಷ್ಟ್ರಧ್ವಜ ಹಾರಾಡುವುದನ್ನು ನೋಡಲಾರಿರಿ. ಯಾವುದೇ ಪಕ್ಷ ದಿನಂಪ್ರತಿ ರಾಷ್ಟ್ರ ಧ್ವಜವನ್ನು ಆರೋಹಣ ಮಾಡುವುದಿಲ್ಲ’’ ಎಂದು ಅವರು ಹೇಳಿದರು. ಈ ನಡುವೆ ಜೆಕೆಎನ್‌ಪಿಪಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಹರ್ ದೇವ್ ಸಿಂಗ್ ಇಲ್ಲಿನ ಪ್ರದರ್ಶನ ಮೈದಾನದಲ್ಲಿ ಪ್ರತಿಭಟನೆ ನಡೆಸಿ ಜಮ್ಮು ಹಾಗೂ ಕಾಶ್ಮೀರದ ನೂತನ ಭೂಸುಧಾರಣಾ ಕಾಯ್ದೆ ಹಿಂದೆಗೆಯುವಂತೆ ಆಗ್ರಹಿಸಿದ್ದಾರೆ. ಇದು ಸ್ಥಳೀಯ ಜನರ ಭೂಮಿ ಹಾಗೂ ಉದ್ಯೋಗ ರಕ್ಷಿಸಲು 1927ರಲ್ಲಿ ನಿಯಮ ರೂಪಿಸಿರುವ ರಾಜ್ಯದ ಕೊನೆಯ ದೊಗ್ರಾ ಮಹಾರಾಜ ಹರಿ ಸಿಂಗ್ ಅವರಿಗೆ ಮಾಡುವ ಅವಮಾನ. ಬಿಜೆಪಿ ಜನರ ನಿಲುವಿಗೆ ವಿರುದ್ಧವಾಗಿ ಈ ನೂತನ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದರು.

 ಬಿಜೆಪಿ ಸರಕಾರ ಈ ಕಾಯ್ದೆ ಜಾರಿಗೆ ತರುವ ಮೂಲಕ ಜಮ್ಮು ಹಾಗೂ ಕಾಶ್ಮೀರದ, ಮುಖ್ಯವಾಗಿ ಜಮ್ಮುವಿನ ಜನರ ನಂಬಿಕೆಗೆ ದ್ರೋಹ ಮಾಡಿದೆ. ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಂಡ ಬಳಿಕ ನಮ್ಮ ಭೂಮಿ ಹಾಗೂ ಉದ್ಯೋಗದ ಹಕ್ಕನ್ನು ರಕ್ಷಿಸಲಾಗುವುದು ಎಂದು ಬಿಜೆಪಿ ಜನರಿಗೆ ಭರವಸೆ ನೀಡಿತ್ತು. ಆದರೆ, ಈ ಅಸಹ್ಯಕರ ಕಾನೂನು ಜನರಲ್ಲಿ ಆಘಾತದ ಅಲೆಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದ್ದಾರೆ. ನೂತನ ಭೂ ಸುಧಾರಣೆ ಕಾಯ್ದೆ ಭೂ ಮಾಫಿಯಾವನ್ನು ಉತ್ತೇಜಿಸುತ್ತದೆ ಎಂದು ಒತ್ತಿ ಹೇಳಿದ ಹರ್ ದೇವ್ ಸಿಂಗ್, ಕೇಂದ್ರ ಸರಕಾರ ಈ ಕಾನೂನನ್ನು ಕೂಡಲೇ ಹಿಂದೆ ತೆಗೆಯಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News