ಎನ್‌ಜಿಒ, ಟ್ರಸ್ಟ್, ಸಾಮಾಜಿಕ ಹೋರಾಟಗಾರರ ಕಚೇರಿ ಮೇಲೆ ಎನ್‌ಐಎ ದಾಳಿ

Update: 2020-10-28 17:04 GMT

ಶ್ರೀನಗರ, ಅ. 28: ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿ ಕಾಶ್ಮೀರದ ಶ್ರೀನಗರ ಹಾಗೂ ಬಂಡಿಪೋರದಲ್ಲಿರುವ ಸರಕಾರೇತರ ಸಂಸ್ಥೆ ಹಾಗೂ ಸ್ಥಳೀಯ ದಿನಪತ್ರಿಕೆ ಕಚೇರಿ ಸೇರಿದಂತೆ 10 ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ದಾಳಿ ನಡೆಸಿದೆ.

ಸರಕಾರೇತರ ಸಂಸ್ಥೆ ಜಮ್ಮು ಕಾಶ್ಮೀರ ಕೊಲೀಶನ್ ಆಫ್ ಸಿವಿಲ್ ಸೊಸೈಟಿ (ಜೆಕೆಸಿಸಿಎಸ್) ಅನ್ನು ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ಖುರ್ರಮ್ ಪರ್ವೇಝ್, ಅವರ ಸಹವರ್ತಿಗಳಾದ ಪರ್ವೇಝ್ ಅಹ್ಮದ್ ಮಟ್ಟಾ ಹಾಗೂ ಬೆಂಗಳೂರು ಮೂಲದ ಸ್ವಾತಿ ಶೇಷಾದ್ರಿ, ಸುದ್ದಿ ಸಂಸ್ಥೆ ಎಎಫ್‌ಪಿಯ ಪತ್ರಕರ್ತ ಪರ್ವೇಝ್ ಅಹ್ಮದ್ ಬುಖಾರಿ, ಅಸೋಸಿಯೇಶನ್ ಆಫ್ ಪೇರೆಂಟ್ಸ್ ಆಫ್ ಡಿಸ್‌ಎಪಿಯರ್ಡ್‌ ಪರ್ಸನ್ಸ್ ಆಫ್ ಕಾಶ್ಮೀರ (ಎಪಿಡಿಪಿಕೆ)ದ ಅಧ್ಯಕ್ಷೆ ಪರ್ವೀನಾ ಅಹಂಗರ್ ಅವರ ಕಚೇರಿ ಮೇಲೆ ಎನ್‌ಐಎ ದಾಳಿ ನಡೆಸಿದೆ. ಅಲ್ಲದೆ, ಸರಕಾರೇತರ ಸಂಸ್ಥೆಗಳಾದ ಅಥ್ರೌಟ್ ಹಾಗೂ ಗ್ರೇಟರ್ ಕೈಲಾಸ ಟ್ರಸ್ಟ್ ಕಚೇರಿ ಮೇಲೂ ಎನ್‌ಐಎ ದಾಳಿ ನಡೆಸಿದೆ.

ತಥಾಕಥಿತ ಸರಕಾರೇತರ ಸಂಸ್ಥೆಗಳು ಹಾಗೂ ಟಸ್ಟ್ಟ್‌ಗಳು ದತ್ತಿ ಚಟುವಟಿಕೆಗಳ ಹೆಸರಲ್ಲಿ ಭಾರತ ಹಾಗೂ ವಿದೇಶಗಳಿಂದ ದೇಣಿಗೆ ಸಂಗ್ರಹಿಸಿವೆ. ಆ ಹಣವನ್ನು ಜಮ್ಮು ಹಾಗೂ ಕಾಶ್ಮೀರದದಲ್ಲಿ ಪ್ರತ್ಯೇಕವಾದಿ ಚಟುವಟಿಕೆಗಳಿಗೆ ಬಳಸಲು ನೀಡಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ. ‘‘ದಾಳಿಯ ಸಂದರ್ಭ ಹಲವು ದೋಷಾರೋಪಣೆ ದಾಖಲೆಗಳು ಹಾಗೂ ಇಲೆಕ್ಟ್ರಾನಿಕ್ಸ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ನಡೆಸುವ ಸಂದರ್ಭ ಎನ್‌ಐಎಗೆ ಸ್ಥಳೀಯ ಪೊಲೀಸರು ಹಾಗೂ ಅರೆ ಸೇನಾ ಪಡೆಗಳ ಸಿಬ್ಬಂದಿ ನೆರವು ನೀಡಿದ್ದರು. ಈ ದಾಳಿ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪಿಡಿಪಿಯ ಮೆಹಬೂಬಾ ಮುಫ್ತಿ, ಇದು ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಪ್ರಯತ್ನ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News