ಸಂಶೋಧನೆಯ ಲಾಭ ಅಶಕ್ತರಿಗೆ ದೊರಕಲಿ: ಪ್ರೊ.ಡಾ.ಅರ್ನಿ ಪುರುಷೋತ್ತಮ್

Update: 2020-10-28 16:30 GMT

ಮಂಗಳೂರು, ಅ.28: ವೈದ್ಯಕೀಯ ಸಂಶೋಧನೆಗಳ ಗುರಿಯು ಜನರ ಬದುಕನ್ನು ಸುರಕ್ಷಿತವಾಗಿ ಇರಿಸುವಂತಿರಬೇಕು. ಇದರ ಗರಿಷ್ಠ ಲಾಭವು ಸಮಾಜದಲ್ಲಿನ ಸೌಲಭ್ಯ ವಂಚಿತರಿಗೆ ತಲುಪುವಂತಾಗಬೇಕು ಎಂದು ಯುನೈಟೆಡ್ ಕಿಂಗ್‌ಡಮ್‌ನ ಕಿಂಗ್ಸ್ ಹೆಲ್ತ್ ಪಾರ್ಟನರ್ಸ್ ಇಂಟಿಗ್ರೇಟೆಡ್ ಕ್ಯಾನ್ಸರ್ ಸೆಂಟರ್‌ನ ನಿರ್ದೇಶಕ ಪ್ರೊ.ಡಾ. ಅರ್ನಿ ಪುರುಷೋತ್ತಮ್ ತಿಳಿಸಿದ್ದಾರೆ.

ದೇರಳಕಟ್ಟೆಯ ಯೆನೆಪೊಯ ವಿಶ್ವವಿದ್ಯಾನಿಲಯದಲ್ಲಿ ಬುಧವಾರ ನಡೆದ 10ನೇ ವಾರ್ಷಿಕ ಘಟಿಕೋತ್ಸವವನ್ನು ವರ್ಚುವಲ್ ಫ್ಲಾಟ್‌ಫಾರ್ಮ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸಾಂಕ್ರಾಮಿಕ ರೋಗಗಳು ಹಾಗೂ ಇತರ ಸಮಸ್ಯೆಗಳಿಂದ ಭೂಮಂಡಲ ಸಮಸ್ಯೆಗೆ ಸಿಲುಕಿದೆ. ಸಾಮೂಹಿಕ ಸಂಘಟಿತ ಪ್ರಯತ್ನಗಳಿಂದ ತೊಂದರೆಗೆ ಈಡಾಗುವುದನ್ನು ತಪ್ಪಿಸಬಹುದಾಗಿದೆ. ಇದರಿಂದಾಗಿ ನಾವು ಬದುಕಲು ಭೂಮಿಯನ್ನು ಸುರಕ್ಷಿತ ತಾಣವನ್ನಾಗಿ ಮಾಡಬಹುದು ಎಂದು ಕರೆ ನೀಡಿದರು.

ಇಂದಿನ ಯುಗದಲ್ಲಿ ಜ್ಞಾನವೊಂದು ಶಕ್ತಿಯಾಗಿದೆ. ಇದನ್ನು ರಚನಾತ್ಮಕ ಉದ್ದೇಶಗಳಿಗೆ ಬಳಸುವಲ್ಲಿ ಆದ್ಯತೆ ನೀಡಬೇಕು. ಬಡವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು. ಬಳಿಕ ಯೆನೆಪೊಯ ವಿಶ್ವವಿದ್ಯಾನಿಲಯದ ಬೆಳವಣಿಗೆಯನ್ನು ಶ್ಲಾಘಿಸಿದರು.

ಘಟಿಕೋತ್ಸವದಲ್ಲಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಪದವಿ ಪುರಸ್ಕಾರದ ಪಟ್ಟಿಯನ್ನು ಮಂಡಿಸಿದರು. ಒಟ್ಟು 750 ಪಿಎಚ್‌ಡಿ, ಎಂ.ಸಿ.ಎಚ್.ಡಿ.ಎಂ./ಎಂ.ಡಿ ಎಂ., ಎಂ.ಡಿ ಎಂ.ಎಸ್, ಎಂ.ಡಿ.ಎಸ್.ಎಂ. ಎಸ್ಸಿ (ಶುಶ್ರೂಷೆ), ಎಂಪಿಟಿ ಸ್ನಾತಕೋತ್ತರ ಡಿಪ್ಲೋಮ ಮತ್ತು ಎಂಬಿಬಿಎಸ್, ಬಿಡಿಎಸ್, ಬಿಎಸ್ಸಿ (ಶುಶ್ರೂಷೆ) ಬಿಪಿಟಿ ಹಾಗೂ ಬಿ.ಕಾಮ್, ಬಿ.ಎಸ್ಸಿ, ಬಿಸಿಎ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.

ಎಂಬಿಬಿಎಸ್, ಬಿಡಿಎಸ್, ಬಿಎಚ್‌ಎ, ಬಿಎಸ್ಸಿ (ಶುಶ್ರೂಷೆ) ಬಿಪಿಟಿ ಹಾಗೂ ಬಿ.ಕಾಂನಲ್ಲಿ ಅತ್ಯುನ್ನತ ಫಲಿತಾಂಶ ದಾಖಲಿಸಿದವರಿಗೆ ಸುವರ್ಣ ಪದಕ ನೀಡಿ ಗೌರವಿಸಲಾಯಿತು. ಯೆನೆಪೋಯ ವಿಶ್ವವಿದ್ಯಾಲಯದ ಕುಲಾಧಿಪತಿ ಯೆನೆಪೊಯ ಅಬ್ದುಲ್ಲ ಕುಂಞಿ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ, ಪದವಿ ಪ್ರಧಾನ ಮಾಡಿದರು.

ಉಪಕುಲಪತಿ ಡಾ.ವಿಜಯಕುಮಾರ್ ಸ್ವಾಗತಿಸಿ, ವಿಶ್ವವಿದ್ಯಾನಿಲಯದ ವಾರ್ಷಿಕ ವರದಿ ಮಂಡಿಸಿದರು. ವಿಶ್ವವಿದ್ಯಾನಿಲಯದ ಪರೀಕ್ಷಾಂಗ ನಿಯಂತ್ರಣಾಧಿಕಾರಿ ಡಾ.ಬಿ.ಟಿ. ನಂದೀಶ್ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಗಂಗಾಧರ ಸೋಮಯಾಜಿ ಕೆ.ಎಸ್. ವಂದಿಸಿದರು. ಡಾ.ಮಲ್ಲಿಕಾ ಶೆಟ್ಟಿ ಮತ್ತು ಡಾ.ರೋಶಲ್ ಟೆಲಿಸ್ ಕಾರ್ಯಕ್ರಮ ನಿರೂಪಿಸಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಬಂಡವಾಳ ಅಗತ್ಯ: ಮಜುಂದಾರ್ ಶಾ

ಕೋವಿಡ್ ಮಹಾ ಸಾಂಕ್ರಾಮಿಕ ರೋಗದಿಂದಾಗಿ ಜಾಗತಿಕ ಆರ್ಥಿಕತೆಗೆ ಬಲವಾಗಿ ಪೆಟ್ಟು ಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯ ಅಗತ್ಯವಿದೆ ಎಂದು ದೇಶದ ಪ್ರತಿಷ್ಠಿತ ಜೈವಿಕ ತಂತ್ರಜ್ಞಾನದ ‘ಬೈಯೊಕಾನ್’ ಸಂಸ್ಥೆಯ ಅಧ್ಯಕ್ಷೆ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಡಾ.ಕಿರಣ್ ಮಜುಮ್ದಾರ್ ಶಾ ತಿಳಿಸಿದ್ದಾರೆ.

ವೈದ್ಯಕೀಯ ಸಂಶೋಧನೆಗಳ ಲಾಭವನ್ನು ಸಾಂಕ್ರಾಮಿಕ ರೋಗಗಳ ವಿರುದ್ಧ ಸಶಕ್ತವಾಗಿ ಪ್ರತಿರೋಧ ನೀಡಲು ಬಳಸಬಹುದು. ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು. ಹಾಗೆಯೇ ಭಾರತದಲ್ಲಿ ಸರ್ವರಿಗೂ ಕೈಗೆಟುಕುವ ರೀತಿಯಲ್ಲಿ ಹೊಸ ಸಂಶೋಧನೆಗಳ ಲಾಭ ದೊರಕು ವಂತಾಗಬೇಕು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News