ಲಡಾಖ್‌ ಚೀನಾದ ಭಾಗವೆಂದು ತೋರಿಸಿದ್ದ ಟ್ವಿಟರ್‌: ಪ್ರಶ್ನಿಸಿದ ಜಂಟಿ ಸಂಸದೀಯ ಸಮಿತಿ

Update: 2020-10-28 17:22 GMT

ಹೊಸದಿಲ್ಲಿ,ಅ.28: ಟ್ವಿಟರ್‌ನ ಪ್ರತಿನಿಧಿಗಳು ಬುಧವಾರ ದತ್ತಾಂಶ ರಕ್ಷಣೆ ಮಸೂದೆ 2019 ಕುರಿತ ಜಂಟಿ ಸಮಿತಿಯ ಮುಂದೆ ಹಾಜರಾಗಿದ್ದು, ಲಡಾಖ್‌ನ್ನು ಚೀನಾದ ಭಾಗವೆಂದು ತೋರಿಸಿದ್ದಕ್ಕಾಗಿ ಸಮಿತಿಯ ಸದಸ್ಯರು ಅವರನ್ನು ಪ್ರಶ್ನಿಸಿದರು. ಈ ವಿಷಯದ ಬಗ್ಗೆ ಲಿಖಿತ ವಿವರಣೆಯನ್ನು ನೀಡುವಂತೆಯೂ ಸಮಿತಿಯು ಅವರಿಗೆ ಸೂಚಿಸಿದೆ.

 ಭಾರತದ ನಕಾಶೆಯಲ್ಲಿ ತಪ್ಪು ಮಾಹಿತಿಯನ್ನು ತೋರಿಸಿದ್ದಕ್ಕಾಗಿ ಕೇಂದ್ರ ಸರಕಾರವು ಅ.22ರಂದು ಟ್ವಿಟರ್ ಸಿಇಒ ಜಾಕ್ ಡೊರ್ಸೆ ಅವರಿಗೆ ತನ್ನ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಅಗೌರವಿಸುವ ಟ್ವಿಟರ್‌ನ ಯಾವುದೇ ಪ್ರಯತ್ನವು ಸಂಪೂರ್ಣ ಅಸ್ವೀಕಾರಾರ್ಹವಾಗಿದೆ ಎಂದು ಅದು ಕಠಿಣ ಶಬ್ದಗಳಲ್ಲಿ ತಿಳಿಸಿತ್ತು.

  ಲಡಾಖ್‌ನ್ನು ಚೀನಾದ ಭಾಗವೆಂದು ತೋರಿಸಿದ್ದಕ್ಕಾಗಿ ಟ್ವಿಟರ್ ನೀಡಿರುವ ವಿವರಣೆಯು ಸಾಲದು ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅಧ್ಯಕ್ಷತೆಯ ಸಮಿತಿಯು ಸರ್ವಾನುಮತದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಲಡಾಖ್‌ನ್ನು ಚೀನಾದ ಭಾಗವೆಂದು ತೋರಿಸುವುದು ಭಾರತದ ಸಾರ್ವಭೌಮತೆಗೆ ವಿರುದ್ಧವಾಗಿದೆ ಮತ್ತು ಏಳು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಬಹುದಾದ ಕ್ರಿಮಿನಲ್ ಅಪರಾಧವಾಗಿದೆ ಎಂದು ಲೇಖಿ ಹೇಳಿದ್ದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.

 ಇಂತಹ ಪ್ರಯತ್ನಗಳು ಟ್ವಿಟರ್‌ಗೆ ಅಗೌರವವನ್ನುಂಟುಮಾಡುವ ಜೊತೆಗೆ ಮಧ್ಯವರ್ತಿಯಾಗಿ ಅದರ ತಟಸ್ಥತೆ ಮತ್ತು ನ್ಯಾಯಪರತೆಯ ಬಗ್ಗೆ ಪ್ರಶ್ನೆಗಳನ್ನೆತ್ತುತ್ತವೆ ಎಂದು ಲಿಖಿತ ಪತ್ರದಲ್ಲಿ ಕಂಪನಿಗೆ ಎಚ್ಚರಿಕೆಯನ್ನು ನೀಡಿದ ಐಟಿ ಕಾರ್ಯದರ್ಶಿ ಅಜಯ ಸಾಹ್ನಿ ಅವರು,ಭಾರತೀಯ ಪ್ರಜೆಗಳ ಸಂವೇದನೆಗಳನ್ನು ಗೌರವಿಸುವಂತೆ ಸೂಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News