ಉ.ಪ್ರ: ಆರು ಬಿಎಸ್‌ಪಿ ಶಾಸಕರ ಬಂಡಾಯ ಪಕ್ಷನಿಷ್ಠೆಯನ್ನು ಬದಲಿಸುವ ಸುಳಿವು

Update: 2020-10-28 17:26 GMT

 ಲಕ್ನೋ,ಅ.28: ಮುಂದಿನ ತಿಂಗಳು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಪಕ್ಷದ ಏಕೈಕ ಅಭ್ಯರ್ಥಿಯ ಹೆಸರನ್ನು ಅನುಮೋದಿಸಿದ್ದ ಬಿಎಸ್‌ಪಿಯ 10 ಶಾಸಕರ ಪೈಕಿ ಆರು ಶಾಸಕರು ತಮ್ಮ ಬೆಂಬಲವನ್ನು ಹಿಂದೆಗೆದುಕೊಂಡಿದ್ದು,ಇದು ಮಾಯಾವತಿ ನೇತೃತ್ವದ ಪಕ್ಷಕ್ಕೆ ಹಿನ್ನಡೆಯನ್ನುಂಟು ಮಾಡಿದೆ. ಈ ಬೆಳವಣಿಗೆಯು ಬಂಡಾಯ ಶಾಸಕರು ಪಕ್ಷಾಂತರಗೊಳ್ಳಬಹುದು ಎಂಬ ಸುಳಿವನ್ನು ನೀಡಿದೆ.

ನಾಲ್ವರು ಬಿಎಸ್‌ಪಿ ಶಾಸಕರಾದ ಅಸ್ಲಾಂ ರೈನಿ,ಅಸ್ಲಾಂ ಚೌಧರಿ,ಮುಜ್ತಬಾ ಸಿದ್ದಿಕಿ ಮತ್ತು ಹಕೀಂ ಲಾಲ್ ಬಿಂಡ್ ಅವರು ಚುನಾವಣಾಧಿಕಾರಿಗಳನ್ನು ಭೇಟಿಯಾಗಿ ಪಕ್ಷದ ಹಿರಿಯ ನಾಯಕ ರಾಮ್ಜಿ ಗೌತಮ್ ಅವರ ನಾಮಪತ್ರದಲ್ಲಿರುವ ತಮ್ಮ ಸಹಿಗಳನ್ನು ಫೋರ್ಜರಿ ಮಾಡಲಾಗಿದೆ ಎಂದು ದೂರಿ ಅಫಿಡವಿಟ್ ಸಲ್ಲಿಸಿದ್ದಾರೆ. ಈ ಸಂದರ್ಭ ಅವರ ಜೊತೆ ಇನ್ನಿಬ್ಬರು ಬಂಡಾಯ ಬಿಎಸ್‌ಪಿ ಶಾಸಕರಾದ ಹರಗೋವಿಂದ ಭಾರ್ಗವ ಮತ್ತು ಸುಷ್ಮಾ ಪಟೇಲ್ ಕೂಡ ಇದ್ದರು.

ತಾನು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದನ್ನು ಪಟೇಲ್ ಒಪ್ಪಿಕೊಂಡಿದ್ದಾರೆ. ಇತರ ಕೆಲವು ಬಂಡಾಯ ಶಾಸಕರು ಪಕ್ಷವು ತಮ್ಮನ್ನು ನಡೆಸಿಕೊಳ್ಳುತ್ತಿದ್ದ ರೀತಿಯ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಉ.ಪ್ರ.ವಿಧಾನಸಭೆಯಲ್ಲಿ ಬಿಎಸ್‌ಪಿಯ 18 ಶಾಸಕರಿದ್ದು,ಬಂಡಾಯ ಗುಂಪು ಪಕ್ಷಾಂತರಕ್ಕೆ ಅಗತ್ಯವಾದ ಮೂರನೇ ಒಂದರಷ್ಟು ಶಾಸಕರನ್ನು ಹೊಂದಿದೆ.

ಬಂಡಾಯ ಶಾಸಕರು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯವರನ್ನು ಗುರಿಯಾಗಿಸಿಕೊಂಡಿಲ್ಲ. ಪಕ್ಷದ ಸಂಚಾಲಕರ ಅನಗತ್ಯ ಹಸ್ತಕ್ಷೇಪಗಳಿಂದ ತಾವು ಬೇಸತ್ತಿದ್ದೇವೆ. ಪಕ್ಷದಲ್ಲಿ ತಮಗೆ ಗೌರವ ದೊರೆಯುತ್ತಿಲ್ಲ ಮತ್ತು ಇದು ತಮ್ಮನ್ನು ಹತಾಶರನ್ನಾಗಿಸಿದೆ. ಇಂತಹ ಪಕ್ಷದಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅವರು ಹೇಳಿದ್ದಾರೆ.

 ಉತ್ತರ ಪ್ರದೇಶದಿಂದ ರಾಜ್ಯಸಭೆಯ 10 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಯು ನ.9ರಂದು ನಡೆಯಲಿದ್ದು,ಬಿಎಸ್‌ಪಿಯ ಅಭ್ಯರ್ಥಿಯಾಗಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ಬಿಹಾರ ಉಸ್ತುವಾರಿ ಗೌತಮ್ ಅವರು ಸೋಮವಾರ ನಾಮಪತ್ರವನ್ನು ಸಲ್ಲಿಸಿದ್ದರು. ತನ್ನ ಸ್ವಂತಬಲದಲ್ಲಿ ಗೌತಮ್ ಅವರನ್ನು ಗೆಲ್ಲಿಸಲು ಅಗತ್ಯ ಶಾಸಕರು ಬಿಎಸ್‌ಪಿ ಬಳಿಯಿಲ್ಲ. ಪಕ್ಷವು ಇತರ ಬಿಜೆಪಿಯೇತರ ಪಕ್ಷಗಳ ಬೆಂಬಲ ಪಡೆಯಬಹುದು ಎಂದು ಬಿಎಸ್‌ಪಿ ನಾಯಕರು ಇಂಗಿತ ವ್ಯಕ್ತಪಡಿಸಿದ್ದಾರೆ.

ಚುನಾವಣಾಧಿಕಾರಿಯನ್ನು ಭೇಟಿಯಾದ ಬಳಿಕ ಎಲ್ಲ ಆರೂ ಶಾಸಕರು ಅಖಿಲೇಶರನ್ನು ಭೇಟಿಯಾಗಲು ಎಸ್‌ಪಿ ಕಚೇರಿಗೆ ತೆರಳಿದ್ದರು ಎನ್ನಲಾಗಿದೆ. ಆದರೆ ಈ ಪೈಕಿ ಇಬ್ಬರು ಇದನ್ನು ನಿರಾಕರಿಸಿದ್ದಾರೆ.

ತನ್ಮಧ್ಯೆ ಬುಧವಾರದ ಬೆಳವಣಿಗೆಗಳಿಗೆ ಎಸ್‌ಪಿ ಕಾರಣವೆಂದು ಬಿಎಸ್‌ಪಿಯ ಹಿರಿಯ ನಾಯಕ ಹಾಗೂ ಶಾಸಕ ಉಮಾಶಂಕರ ಸಿಂಗ್ ಅವರು ಪರೋಕ್ಷವಾಗಿ ದೂರಿದ್ದಾರೆ. ಎಸ್‌ಪಿ ಕೊನೆಯ ಕ್ಷಣದಲ್ಲಿ ಕೈಗಾರಿಕೋದ್ಯಮಿ ಪ್ರಕಾಶ ಬಜಾಜ್ ಅವರನ್ನು ಕಣಕ್ಕಿಳಿಸಿದ್ದು,ಅದು ಬಿಎಸ್‌ಪಿಯ ಶಾಸಕರಿಗೆ ಆಮಿಷಗಳನ್ನೊಡ್ಡುವ ಮೂಲಕ ಕುದುರೆ ವ್ಯಾಪಾರಕ್ಕಿಳಿದಿದೆ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News