ಜಮ್ಮು-ಕಾಶ್ಮೀರ: ಹೊಸ ಭೂ ಕಾನೂನು ಅಧಿಸೂಚನೆ ತಿರಸ್ಕರಿಸಿದ ಕಾಂಗ್ರೆಸ್

Update: 2020-10-28 17:36 GMT

ಶ್ರೀನಗರ,ಅ.28: ಜಮ್ಮು-ಕಾಶ್ಮೀರದಲ್ಲಿ ಹೊಸ ಭೂ ಕಾನೂನಿಗೆ ಸಂಬಂಧಿಸಿದಂತೆ ಕೇಂದ್ರವು ಹೊರಡಿಸಿರುವ ಅಧಿಸೂಚನೆಯನ್ನು ತನ್ನ ಪಕ್ಷವು ತಿರಸ್ಕರಿಸುತ್ತದೆ ಎಂದು  ಜಮ್ಮು-ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಗುಲಾಂ ಅಹ್ಮದ್ ಮಿರ್ ಅವರು ಹೇಳಿದ್ದಾರೆ.

ಬುಧವಾರ ಬಂಡಿಪೋರ ಜಿಲ್ಲೆಯ ಗುರೆಝ್‌ನಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು,ಹೊಸ ಭೂ ಕಾನೂನು ಜಮ್ಮು-ಕಾಶ್ಮೀರದ ಜನರಿಗೆ ಬಿಜೆಪಿಯ ಇನ್ನೊಂದು ಉಡುಗೊರೆಯಾಗಿದೆ. ನೂತನ ಭೂ ಕಾನೂನನ್ನು ಕಾಂಗ್ರೆಸ್ ತಿರಸ್ಕರಿಸುತ್ತದೆ ಮತ್ತು ಹಕ್ಕುಗಳ ರಕ್ಷಣೆಗಾಗಿ ಪಣ ತೊಟ್ಟಿದೆ ಎಂದರು.

ಕೇಂದ್ರವು ಮಂಗಳವಾರ ಹಲವಾರು ಕಾನೂನುಗಳನ್ನು ತಿದ್ದುಪಡಿಗೊಳಿಸುವ ಮೂಲಕ ದೇಶಾದ್ಯಂತದ ಜನರು ಜಮ್ಮು-ಕಾಶ್ಮೀರದಲ್ಲಿ ಭೂಮಿಯನ್ನು ಖರೀದಿಸಲು ಅವಕಾಶ ಕಲ್ಪಿಸಿದೆ.

 ದ್ರೋಹ ಮತ್ತು ವಂಚನೆಯ ರಾಜಕಾರಣ ಬಿಜೆಪಿಯ ಹೆಗ್ಗುರುತುಗಳಾಗಿವೆ ಮತ್ತು ಅದು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಜನತೆಯಿಂದ ಪ್ರತಿಯೊಂದನ್ನೂ ಕಿತ್ತುಕೊಳ್ಳಲು ಪಣ ತೊಟ್ಟಿದೆ. ಅದಕ್ಕೆ ರಾಜ್ಯದ ಜನತೆಯ ಆಕಾಂಕ್ಷೆಗಳ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲ. ಅದು ಏಕಪಕ್ಷೀಯವಾಗಿ ರಾಜಕೀಯ ಪ್ರೇರಿತ ಮತ್ತು ಜನತೆಯ ಇಚ್ಛೆಗೆ ವಿರುದ್ಧವಾದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ. ನೂತನ ಕಾನೂನು ಜಮ್ಮು-ಕಾಶ್ಮೀರದಲ್ಲಿ ಅಶಾಂತಿಯನ್ನು ಸೃಷ್ಟಿಸಲಿದೆ ಎಂದು ಮಿರ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News