ಫರಂಗಿಪೇಟೆಯಲ್ಲಿ ಸ್ಟುಡಿಯೋ ಮಾಲಕನ ಕೊಲೆಯತ್ನ ಪ್ರಕರಣ : ಮೂವರು ಆರೋಪಿಗಳ ಸೆರೆ

Update: 2020-10-29 03:42 GMT

ಬಂಟ್ವಾಳ, ಅ.29: ಬುಧವಾರ ರಾತ್ರಿ ಫರಂಗಿಪೇಟೆಯ ತೃಷಾ ಸ್ಟುಡಿಯೋ ಮಾಲಕ ದಿನೇಶ್ ಕೊಟ್ಟಿಂಜ ಅವರ ಕೊಲೆಗೆ ಯತ್ನ ನಡೆಸಿದ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮ್ಮೆಮ್ಮಾರು ನಿವಾಸಿ ಮುಹಮ್ಮದ್  ಅರ್ಷದ್(19),ಅಬ್ದುಲ್ ರಹ್ಮಾನ್(22) ಮತ್ತು ಮುಹಮ್ಮದ್ ಸೈಪುದ್ದೀನ್(22) ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ಸವಾದ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ರಾತ್ರಿ ಸುಮಾರು 7:15ರ ವೇಳೆಗೆ ಪುದು ಗ್ರಾಮದ ಫರಂಗಿಪೇಟೆಯಲ್ಲಿನ ದಿನೇಶ್ ಅವರಿಗೆ ಸೇರಿದ ತೃಷಾ ಸ್ಟುಡಿಯೋಗೆ 4 ಮಂದಿ ಯುವಕರ ತಂಡ ಫೋಟೋ ತೆಗೆಸುವ ನೆಪದಲ್ಲಿ ಬಂದು ದಿನೇಶ್ ಅವರ ತಲೆಗೆ, ಬಲ ಕೈಗೆ ಹಾಗೂ ಎಡ ಕಿಬ್ಬೊಟ್ಟೆಗೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಸ್ಥಳದಲ್ಲಿದ್ದ ಶೇಖರ ಪೂಜಾರಿ ಎಂಬವರು ಹಲ್ಲೆ ತಡೆಯಲು ಅಲ್ಲೇ ಇದ್ದ ಕುರ್ಚಿಯನ್ನು ಬಲವಾಗಿ ಇಬ್ಬರು ಆರೋಪಿಗಳ ಮೇಲೆ ಬೀಸಿದ್ದು, ಶೇಖರ ಪೂಜಾರಿ ಅವರಿಗೂ ಘಟನೆಯಿಂದ ಗಾಯವಾಗಿರುತ್ತದೆ. ಗಾಯಗೊಂಡ ದಿನೇಶ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಇತ್ತೀಚೆಗೆ ಫರಂಗಿಪೇಟೆ ಸಮೀಪದ ಕುಂಪಣಮಜಲು ಎಂಬಲ್ಲಿ ಯುವತಿಯೊಬ್ಬಳ ಮೇಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದಿನೇಶ್ ಅವರು ಯುವತಿಯ ಕಡೆಯವರಿಗೆ ಬೆಂಬಲ ನೀಡಿದ್ದ ದ್ವೇಷದಿಂದ ಈ ಹಲ್ಲೆ ಪ್ರಕರಣ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಡಾ. ಲಕ್ಷ್ಮೀ ಪ್ರಸಾದ್ ಭೇಟಿ ನೀಡಿದ್ದು, ಸೂಕ್ತ ಬಂದೋಬಸ್ತ್ ಗೆ ಮಾರ್ಗದರ್ಶನ ನೀಡಿದ್ದಾರೆ. ಬಂಟ್ವಾಳ ಡಿವೈಸ್ಪಿ ವೆಲೆಂಟೈನ್ ಡಿ’ಸೋಜ, ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್, ಗ್ರಾಮಾಂತರ ಎಸ್ಸೈ ಪ್ರಸನ್ನ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಬಂದೋಬಸ್ತ್ ಗೆ ನೇತೃತ್ವ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News