ಫರಂಗಿಪೇಟೆಯಲ್ಲಿ ಗೆದ್ದ ಮಾನವೀಯತೆ‌ ಸೋತ ಮತೀಯತೆ

Update: 2020-10-29 07:39 GMT

ಬಂಟ್ವಾಳ, ಅ. 29: ತಾಲೂಕಿನ ಫರಂಗಿಪೇಟೆಯಲ್ಲಿ ಬುಧವಾರ ರಾತ್ರಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಬಿಜೆಪಿ ಮುಖಂಡ, ಫೋಟೋಗ್ರಾಫರ್ ದಿನೇಶ್ ಶೆಟ್ಟಿ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುವ ಮೂಲಕ ಆಟೋ ಚಾಲಕ ಅಬ್ದುಲ್ ರಶೀದ್ ಪಾವೂರ್ ಎಂಬವರು ಮಾನವೀಯತೆ ಮೆರೆದಿದ್ದಾರೆ. ಇನ್ನೊಂದೆಡೆ ಯಾವುದೇ ಅಶಾಂತಿಗೆ ಆಸ್ಪದ ಕೊಡದೆ ಇಲ್ಲಿನ ನಾಗರಿಕರು ಶಾಂತಿ ಸುವ್ಯವಸ್ಥೆ ಕಾಪಾಡಿದ್ದಾರೆ. 

ರಾತ್ರಿ 8 ಗಂಟೆಯ ಸುಮಾರಿಗೆ ದುಷ್ಕರ್ಮಿಗಳ ತಂಡ ದಿನೇಶ್ ಶೆಟ್ಟಿ ಮೇಲೆ ಮಾರಕ ಆಯುಧಗಳಿಂದ ದಾಳಿ ನಡೆಸಿತ್ತು. ತೀವ್ರ ಗಾಯಗೊಂಡು ಸ್ಟುಡಿಯೋ ಒಳಗೆ ಬಿದ್ದಿದ್ದ ದಿನೇಶ್ ಶೆಟ್ಟಿ ಅವರನ್ನು ಅಬ್ದುಲ್ ರಶೀದ್ ಪಾವೂರು ತನ್ನ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ದೊರೆಯುವಂತೆ ಮಾಡಿದ ಅಬ್ದುಲ್ ರಶೀದ್ ಪಾವೂರು ಅವರ ಕೆಲಸದಿಂದ ದಿನೇಶ್ ಶೆಟ್ಟಿ ಅವರ ಪ್ರಾಣಕ್ಕೆ ಆಗಬಹುದಾದ ಅಪಾಯ ತಪ್ಪಿದೆ.

ಅಬ್ದುಲ್ ರಶೀದ್ ಪಾವೂರು ಅವರು ಫರಂಗಿಪೇಟೆ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ. ಫರಂಗಿಪೇಟೆ ರಿಕ್ಷಾ ಪಾರ್ಕ್ ನಲ್ಲಿ ದುಡಿಯುತ್ತಿದ್ದಾರೆ. ಇದೀಗ ಅವರ ಮಾನವೀಯ ಸೇವೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಈ ಬಗ್ಗೆ  ವಾರ್ತಾಭಾರತಿಯೊಂದಿಗೆ ಮಾತನಾಡಿದ ಅಬ್ದುಲ್ ರಶೀದ್ ಪಾವೂರು, "ನಾನು ಫರಂಗಿಪೇಟೆಯ ಅಂಗಡಿಯೊಂದರಲ್ಲಿ ತಿಂಡಿ ತಿನ್ನುತ್ತಿದ್ದೆ. ಈ ವೇಳೆ ಲಕ್ಷ್ಮಣ ಎಂಬವರು ಬಂದು ವಿಷಯ ಹೇಳಿದರು. ಕೂಡಲೇ ನಾನು ಸ್ಟುಡಿಯೋಗೆ ತೆರಳಿ ಲಕ್ಷ್ಮಣ ಮತ್ತು ಶೇಖರ ಎಂಬವರ ಸಹಾಯದಿಂದ ದಿನೇಶ್ ಶೆಟ್ಟಿ ಅವರನ್ನು ತನ್ನ ಆಟೋ ರಿಕ್ಷಾಗೆ ಹಾಕಿ ಆಸ್ಪತ್ರೆಗೆ ಸಾಗಿಸಿದೆವು" ಎಂದು ಘಟನೆಯನ್ನು ವಿವರಿಸಿದರು.

"ಮೊದಲು ನಾವು ಅಡ್ಯಾರ್ ಕಣ್ಣೂರು ಸಮೀಪದ ಖಾಸಗಿ ಆಸ್ಪತ್ರೆಗೆ ದಿನೇಶ್ ಅವರನ್ನು ಕರೆದುಕೊಂಡು ಹೋದೆವು. ಆ ಆಸ್ಪತ್ರೆಯ ವೈದ್ಯರು ಕೂಡಲೇ ನೀವು ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದರು. ಅಲ್ಲಿಂದ ಆಂಬುಲೆನ್ಸ್ ನಲ್ಲಿ ಮಂಗಳೂರು ಆಸ್ಪತ್ರೆಗೆ ದಿನೇಶ್ ಅವರನ್ನು ಸಾಗಿಸಲಾಯಿತು ಎಂದು ಅಬ್ದುಲ್ ರಶೀದ್ ಪಾವೂರು ತಿಳಿಸಿದ್ದಾರೆ.

ಇನ್ನೊಂದೆಡೆ ಘಟನೆಯ ಸುದ್ದಿ ಹರಡುತ್ತಿದ್ದಂತೆ ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಆದರೆ ಸಮಾಜದ ಅಶಾಂತಿಗೆ ಯಾರೂ ಆಸ್ಪದ ನೀಡದೆ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಮಾನವೀಯತೆಯನ್ನು ಗೆಲ್ಲಿಸಿ ಮತೀಯತೆಯನ್ನು ಸೋಲಿಸಿದ್ದಾರೆ. 

ಒಂದೇ ವಾರದಲ್ಲಿ ಬಂಟ್ವಾಳದಲ್ಲಿ ನಡೆದ ಎರಡು ಕೊಲೆಯಿಂದ ಆತಂಕಕ್ಕೆ ಒಳಗಾದ ಬಂಟ್ವಾಳ ತಾಲೂಕಿನ ಜನತೆಯನ್ನು ಫರಂಗಿಪೇಟೆಯಲ್ಲಿ ನಡೆದ ಕೊಲೆಯತ್ನ ಘಟನೆ ಮತ್ತಷ್ಟು ಆತಂಕಕ್ಕೆ ದೂಡಿದೆ. ತಾಲೂಕಿನಲ್ಲಿ ಹೆಚ್ಚುತ್ತಿರುವ ಗಾಂಜಾ ಮಾಫಿಯಾದಿಂದ ಅಹಿತಕರ ಘಟನೆಗಳು ಕೂಡಾ ಹೆಚ್ಚುತ್ತಿವೆ‌. ಗಾಂಜಾ ಮಾಫಿಯಾದ ನಿಯಂತ್ರಣಕ್ಕೆ ಪೊಲೀಸರು ಸೂಕ್ತ ಕ್ರಮ ಜರಗಿಸಬೇಕು ಎಂದು ಶಾಂತಿ ಪ್ರಿಯರ ಆಗ್ರಹವಾಗಿದೆ.

ಅಬ್ದುಲ್ ರಶೀದ್ ಪಾವೂರ್

Writer - ಇಮ್ತಿಯಾಝ್ ಶಾ ತುಂಬೆ

contributor

Editor - ಇಮ್ತಿಯಾಝ್ ಶಾ ತುಂಬೆ

contributor

Similar News